
ಹುಬ್ಬಳ್ಳಿ: ಧಾರ್ಮಿಕ ಸಾಮರಸ್ಯ ಕದಡುವ ಹೇಳಿಕೆಗಳಿಗಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣನವರ್ ಹಾಗೂ ‘ಕುಡ್ಲ ರ‍್ಯಾಂಪೇಜ್’ ಎಂಬ ಯೂಟ್ಯೂಬ್ ವಾಹಿನಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಿರೀಶ್ ಮಟ್ಟಣ್ಣನವರ್ ಅವರು ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೈನ ಸಮಾಜದ ಮುಖಂಡರಾದ ಅಜಿತ್ ಅವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಿರೀಶ್ ಮಟ್ಟಣ್ಣನವರ್ ಅವರು ಜೈನ ಸಮುದಾಯದವರನ್ನು ‘ಕ್ರೂರರು, ಸ್ತ್ರೀಲೋಲರು, ಮತಾಂಧರು’ ಎಂದು ನಿಂದಿಸಿದ್ದಾರೆ. ಈ ಅವಹೇಳನಕಾರಿ ಮಾತುಗಳನ್ನು ಯಾವುದೇ ದಾಖಲೆಗಳಿಲ್ಲದೆ ‘ಕುಡ್ಲ ರ‍್ಯಾಂಪೇಜ್’ ಯೂಟ್ಯೂಬ್ ವಾಹಿನಿಯು ಪ್ರಸಾರ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ರೀತಿಯ ಹೇಳಿಕೆಗಳು ಜೈನ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅಜಿತ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 299 ಮತ್ತು 196(1)(ಎ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಗಿರೀಶ್ ಮಟ್ಟಣ್ಣನವರ್ ಮತ್ತು ಯೂಟ್ಯೂಬ್ ವಾಹಿನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೈನ ಸಮುದಾಯದ ಹಲವು ಮುಖಂಡರು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ಮುಂದುವರೆಸಿದ್ದಾರೆ.