
ಕೊಪ್ಪಳ : ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನ ಭೀಕರ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್ ನಂ. 3 ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬಾತ ಗವಿಸಿದ್ದಪ್ಪ ನಾಯಕ್ ಎಂಬ ಯುವಕನನ್ನು ಹತ್ಯೆ ಮಾಡಿದ್ದು, ಕೊಲೆಯಾದ ಯುವಕನ ತಂದೆ ನಿಂಗಜ್ಜ ಅವರು ಆರೋಪಿ ಸಾದಿಕ್ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೊಲೆ ಮಾಡಿ ಶರಣಾದ ಆರೋಪಿ
ಕೊಲೆ ಮಾಡಿದ ನಂತರ ಆರೋಪಿ ಸಾದಿಕ್ ನೇರವಾಗಿ ನಗರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆತನ ವಿರುದ್ಧ ಎಸ್.ಸಿ-ಎಸ್.ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಈ ಕೊಲೆಗೆ ಮುಖ್ಯ ಕಾರಣ ಗವಿಸಿದ್ದಪ್ಪ ಹಾಗೂ ಅಪ್ರಾಪ್ತ ಮುಸ್ಲಿಂ ಯುವತಿಯ ನಡುವಿನ ಪ್ರೇಮ ಸಂಬಂಧ. ಕಳೆದ ಎರಡು ವರ್ಷಗಳಿಂದ ಈ ಸಂಬಂಧ ಮುಂದುವರಿದಿತ್ತು. ಈ ಬಗ್ಗೆ ನಾಲ್ಕೈದು ಬಾರಿ ಪಂಚಾಯತಿಯೂ ನಡೆದಿತ್ತು. ಆದರೆ, ಇಬ್ಬರ ಪ್ರೀತಿ ಮುಂದುವರೆದಿದ್ದರಿಂದ ಸಾದಿಕ್ ಮಚ್ಚಿನಿಂದ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾನೆ.
ಪೂರ್ವ ನಿಯೋಜಿತ ಕೃತ್ಯದ ಶಂಕೆ
ಇದು ಪೂರ್ವ ನಿಯೋಜಿತ ಕೊಲೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದ ಗವಿಸಿದ್ದಪ್ಪನನ್ನು ಅಡ್ಡಗಟ್ಟಿ, ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ರೀತಿಯ ಭೀಕರ ಕೊಲೆಯಿಂದಾಗಿ ಇಡೀ ಕೊಪ್ಪಳ ನಗರ ಬೆಚ್ಚಿಬಿದ್ದಿದೆ. ಕೊಲೆಯಾದ ಗವಿಸಿದ್ದಪ್ಪ, ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ನಾಯಕ್ ಅವರ ಸಂಬಂಧಿ ಎಂದು ತಿಳಿದುಬಂದಿದೆ.
ಸಾದಿಕ್ ಪ್ರೀತಿ ಬ್ರೇಕ್‌ಅಪ್ ಕಾರಣ?
ಮೂಲಗಳ ಪ್ರಕಾರ, ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಮುಸ್ಲಿಂ ಯುವತಿಯನ್ನು ಈ ಹಿಂದೆ ಸಾದಿಕ್ ಕೂಡ ಪ್ರೀತಿಸುತ್ತಿದ್ದನಂತೆ. ಯುವತಿ ಸಾದಿಕ್‌ನೊಂದಿಗೆ ಪ್ರೀತಿ ಮುರಿದುಕೊಂಡು ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಈ ವಿಷಯ ತಿಳಿದ ಸಾದಿಕ್ ಹಲವು ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಮಾಡಿದ್ದ ಎಂದು ಹೇಳಲಾಗಿದೆ. ಈ ಜಗಳ ಅತಿರೇಕಕ್ಕೆ ಹೋಗಿ ಭಾನುವಾರ ರಾತ್ರಿ 8 ಗಂಟೆಗೆ ಮಸೀದಿ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಮತ್ತು ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಾದಿಕ್ ಶರಣಾಗಿದ್ದು, ಆದರೆ ಆತನಿಗೆ ಸಹಾಯ ಮಾಡಿದ ಇಬ್ಬರು-ಮೂವರು ನಾಪತ್ತೆಯಾಗಿದ್ದಾರೆ. ಕೊಲೆ ಮಾಡಿ ಶರಣಾದ ಸಾದಿಕ್ ಪ್ರೀತಿ ವಿಚಾರಕ್ಕಾಗಿಯೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಎರಡು ಮಚ್ಚುಗಳು ಪತ್ತೆಯಾಗಿರುವುದು, ಸಾದಿಕ್ ಒಬ್ಬನೇ ಕೊಲೆ ಮಾಡಿದ್ದಾನೆ ಎಂಬ ಪೊಲೀಸರ ಹೇಳಿಕೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮೂವರು ಮುಸ್ಲಿಂ ಯುವಕರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.