
ಭುವನೇಶ್ವರ : ಮಹಿಳೆಯೊಬ್ಬರನ್ನು ಅಪಹರಿಸಿ, ಆರು ತಿಂಗಳ ಕಾಲ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಭೀಕರ ಘಟನೆಯು ಭುವನೇಶ್ವರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳಿನಿಂದ ಅಪಹರಣದಲ್ಲಿದ್ದ 23 ವರ್ಷದ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ
ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬರಿಪಾದ ಮೂಲದ ಯುವತಿ ಈ ದುರ್ಘಟನೆಗೆ ಬಲಿಯಾಗಿದ್ದಾಳೆ. ಸ್ಥಳೀಯ ವ್ಯಕ್ತಿಯೊಬ್ಬರು ಆಕೆಯನ್ನು ಅಪಹರಿಸಿ ಭುವನೇಶ್ವರದ ಒರುಪಾದ ಎಂಬ ಪ್ರದೇಶದಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ. ಕಳೆದ ಆರು ತಿಂಗಳಿಂದ ಆಕೆಯನ್ನು ಹಲವಾರು ವ್ಯಕ್ತಿಗಳೊಂದಿಗೆ ಸೇರಿ ದೈಹಿಕ ಹಿಂಸೆ ನೀಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಅಂತಿಮವಾಗಿ, ಆರೋಪಿಗಳ ಕಣ್ತಪ್ಪಿಸಿ ತಪ್ಪಿಸಿಕೊಂಡು ಬಂದ ಯುವತಿ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ ಹಾಗೂ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.