
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಅರೇಬಿ ಸಮುದ್ರದಲ್ಲಿ ಈಜಲು ಹೋದ ಇಬ್ಬರು ಸಹೋದರರು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮೃತರನ್ನು ಮದನ್ ನಾರಾಯಣ ಖಾರ್ವಿ (17) ಮತ್ತು ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸಹೋದರರ ಅಕಾಲಿಕ ಸಾವು ಮಂಕಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ಘಟನೆಯ ಹಿನ್ನೆಲೆ:
ಮಾಹಿತಿಯ ಪ್ರಕಾರ, ಸಹೋದರರಿಬ್ಬರು ಸಂಜೆ ಸ್ನೇಹಿತರೊಂದಿಗೆ ಕಬಡ್ಡಿ ಆಟ ಆಡಿದ್ದರು. ಆಟದ ನಂತರ ಮೈದಾನದ ಸಮೀಪವಿರುವ ಸಮುದ್ರಕ್ಕೆ ಈಜಲು ಇಳಿದಿದ್ದರು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ, ಇಬ್ಬರೂ ಬಲವಾದ ಅಲೆಗಳಿಗೆ ಸಿಲುಕಿ ಸಮುದ್ರದ ಆಳಕ್ಕೆ ಕೊಚ್ಚಿ ಹೋಗಿದ್ದಾರೆ.
ಶವಗಳ ಪತ್ತೆ:
ಘಟನೆ ನಡೆದ ತಕ್ಷಣ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರು ವ್ಯಾಪಕ ಹುಡುಕಾಟ ನಡೆಸಿದರು. ರಾತ್ರಿ 11:30 ರ ಸುಮಾರಿಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮಂಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಿಗೆ ಆಟವಾಡಿ, ಒಟ್ಟಿಗೆ ಈಜಲು ಹೋದ ಸಹೋದರರಿಬ್ಬರು ಶವವಾಗಿ ಮನೆಗೆ ಮರಳುತ್ತಿರುವುದು ಹೆತ್ತವರ ಮತ್ತು ಗ್ರಾಮಸ್ಥರ ಕರುಳು ಹಿಂಡುವಂತಿದೆ.




































