
ಹಾಂಗ್ ಕಾಂಗ್: ದುಬೈನಿಂದ ಸರಕುಗಳನ್ನು ಹೊತ್ತು ತಂದಿದ್ದ ವಿಮಾನವೊಂದು ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದಿರುವ ಭೀಕರ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಘಟನಾ ಸ್ಥಳದಿಂದ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದು, ಜೊತೆಗೆ ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿಗಳು ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಅವರ ವಿವರಗಳನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ.
ಸ್ಥಳೀಯ ಸಮಯ ಬೆಳಗಿನ ಜಾವ 3:50 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರವು ದೃಢಪಡಿಸಿದೆ. ಅಪಘಾತಕ್ಕೀಡಾದ ಸರಕು ವಿಮಾನವು ಎಮಿರೇಟ್ಸ್ ವಿಮಾನ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಘಟನೆ ಕುರಿತು ವಿಮಾನಯಾನ ಸಂಸ್ಥೆಯು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಗೆ ಕಾರಣವನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ.



































