
ಬೆಂಗಳೂರು: ಖಾಸಗಿ ಪ್ರೀ-ಸ್ಕೂಲ್ ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ರುಡಿಗಿ ಹನಿಟ್ರ್ಯಾಪ್ ಮೂಲಕ ಪೋಷಕರೊಬ್ಬರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಶ್ರೀದೇವಿ ಸೇರಿದಂತೆ ಆಕೆಯ ಸಹಚರರಾದ ಸಾಗರ್ ಹಾಗೂ ಅರುಣ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಣ ಸಹಾಯದಿಂದ ಹನಿಟ್ರ್ಯಾಪ್ ತನಕ!
2023ರಲ್ಲಿ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಖಾಸಗಿ ಪ್ರೀ-ಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ, ಪೋಷಕ ರಾಕೇಶ್ ಅವರಿಗೆ ಪರಿಚಯವಾಗಿದ್ದರು. ಶಾಲೆ ನಿರ್ವಹಣೆ ಹಾಗೂ ತಂದೆಯ ಚಿಕಿತ್ಸೆಗೆಂದು ರಾಕೇಶ್‌ನಿಂದ 4 ಲಕ್ಷ ರೂಪಾಯಿ ಸಾಲವಾಗಿ ಪಡೆದು, 2024ರ ಮಾರ್ಚ್‌ನಲ್ಲಿ ವಾಪಸ್ ಕೊಡಲು ಒಪ್ಪಿಕೊಂಡಿದ್ದರು. ಆದರೆ ಹಣ ವಾಪಸ್ ಕೇಳಿದಾಗ, ಅದನ್ನು ಕೊಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿ, ‘ನೀವು ಶಾಲೆಯ ಪಾರ್ಟನರ್ ಆಗಿ’ ಎಂಬ ಆಫರ್ ನೀಡಿದ್ದರು.
ಸಂಬಂಧದಿಂದ ಬ್ಲ್ಯಾಕ್‌ಮೇಲ್ ತನಕ
ಶ್ರೀದೇವಿ ಹಾಗೂ ರಾಕೇಶ್ ನಡುವಿನ ಸಂಬಂಧ ವೃದ್ಧಿಯಾಗಿ, ಇಬ್ಬರೂ ಜತೆಯಾಗಿ ಹಲವು ಕಡೆಗಳಿಗೆ ಸುತ್ತಾಡಿದರು. ಈ ನಡುವೆ, ಜನವರಿ 2024ರ ಮೊದಲ ವಾರದಲ್ಲಿ ರಾಕೇಶ್ ತಮ್ಮ ಹಣವನ್ನು ವಾಪಸ್ ಕೇಳಿದಾಗ, ಶ್ರೀದೇವಿ 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ರಾಕೇಶ್ ಒಪ್ಪಲಿಲ್ಲ.ನಂತರ, ಶ್ರೀದೇವಿ ರಾಕೇಶ್ ಅವರ ಮನೆಗೆ ತೆರಳಿ, ಅವರಿಗೆ ಮುತ್ತುಕೊಟ್ಟು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ 50 ಸಾವಿರ ರೂಪಾಯಿ ವಸೂಲಿ ಮಾಡಿದರು. ಹೀಗೇ ಪದೇ ಪದೇ ಹಣಕ್ಕೆ ಬೇಡಿಕೆ ಇಡುವ ಹಿನ್ನಲೆಯಲ್ಲಿ, ರಾಕೇಶ್ ಈ ಸಂಬಂಧಕ್ಕೆ ತೆರೆ ಎಳೆಯಲು ನಿರ್ಧರಿಸಿದರು. ಅವರೊಂದಿಗೆ ಸಂಪರ್ಕ ಇಟ್ಟಿದ್ದ ಸಿಮ್ ಕಾರ್ಡ್ ಮುರಿದುಬಿಸಾಕಿದರು.
ಬ್ಲ್ಯಾಕ್‌ಮೇಲ್‌ಗೆ ಬಲಿಯಾದ ಪೋಷಕ
ಮಾರ್ಚ್ 12ರಂದು, ಶ್ರೀದೇವಿ ರಾಕೇಶ್ ಪತ್ನಿಗೆ ಕರೆ ಮಾಡಿ, ‘ನಿಮ್ಮ ಮಕ್ಕಳ ಟಿಸಿ ಕಳುಹಿಸುತ್ತೇನೆ, ಪತಿಯನ್ನು ಕಳುಹಿಸಿ’ ಎಂದರು. ಇದರಿಂದಾಗಿ ರಾಕೇಶ್ ಅವರ ಶಾಲೆಗೆ ಹೋದಾಗ, ಅಲ್ಲಿ ನಿರೀಕ್ಷೆಯಂತೆ ಶ್ರೀದೇವಿಯೊಂದಿಗೆ ಆರೋಪಿ ಸಾಗರ್ ಹಾಗೂ ಗಣೇಶ್ ಕೂಡಿದ್ದರು.ಅವರು ರಾಕೇಶ್‌ಗೆ ಬೆದರಿಕೆ ಹಾಕಿ, ‘‘ಸಾಗರ್ ಹಾಗೂ ಶ್ರೀದೇವಿಯ ನಿಶ್ಚಿತಾರ್ಥವಾಗಿದೆ, ಆದರೆ ನೀನು ಆಕೆಯೊಂದಿಗೆ ಸಂಬಂಧ ಹೊಂದಿದ್ದಿ’’ ಎಂದು ಆರೋಪಿಸಿದರು. ನಂತರ, ರಾಕೇಶ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು, ಬ್ಲ್ಯಾಕ್‌ಮೇಲ್ ಮಾಡುತ್ತಾ, ‘‘ಇದು ಯಾರಿಗೂ ತಿಳಿಯಬಾರದು ಎಂದರೆ 1 ಕೋಟಿ ರೂಪಾಯಿ ಕೊಡು’’ ಎಂದು ಬೆದರಿಕೆ ಹಾಕಿದರು. ಕೊನೆಗೂ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಅದರಲ್ಲಿ 1.90 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು.
ಆರೋಪಿಗಳ ಬಂಧನ
ಹಣದ ನಿರಂತರ ಬೇಡಿಕೆ ಹಾಗೂ ಜೀವ ಬೆದರಿಕೆ ತಾಳಲಾರದೆ, ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಶ್ರೀದೇವಿ, ಸಾಗರ್ ಹಾಗೂ ಅರುಣ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ. ಮೂವರೂ ವಿಜಯಪುರ ಮೂಲದವರಾಗಿದ್ದಾರೆ ಎಂದು ವರದಿ ತಿಳಿಸಿದೆ.