
ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಾವು ನೀಡಿದ್ದಾರೆ ಎನ್ನಲಾದ ಹೇಳಿಕೆಗಾಗಿ ಬಂಧನಕ್ಕೆ ಒತ್ತಾಯಿಸಿದ ಬಿಜೆಪಿ ನಾಯಕರು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೀಶ್ ಪೂಂಜಾ ಹೇಳಿಕೆ ಅಸ್ತ್ರ
ಮಾಧ್ಯಮದೊಂದಿಗೆ ಮಾತನಾಡಿದ ತಿಮರೋಡಿ, ತಾನು ಯಾವುದೇ ಸ್ವಂತ ಹೇಳಿಕೆ ನೀಡಿಲ್ಲ, ಬದಲಿಗೆ ಶಾಸಕ ಹರೀಶ್ ಪೂಂಜಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. “ಶಾಸಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಮರ್ಡರ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಶಾಸಕರು ಹೇಳಿದ ಮೇಲೆ ನಮಗೂ ಕೂಡ ಸಂಶಯ ಬಂದಿದೆ. ಹಾಗಾಗಿ, ಒಂದೋ ಶಾಸಕನನ್ನು ಅಮಾನತು ಮಾಡಬೇಕು, ಇಲ್ಲವಾದರೆ ನಿಮ್ಮ ತಲೆ ದಂಡವಾಗಬೇಕು ಎಂದು ಹೇಳಿದ್ದೆ. ಇದರಲ್ಲಿ ಏನು ತಪ್ಪಿದೆ?” ಎಂದು ಅವರು ಪ್ರಶ್ನಿಸಿದರು.
ತಿಮರೋಡಿ ಅವರು ಗೃಹ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದ್ದು, “ಅವರು ಗೃಹ ಮಂತ್ರಿಯಾ ಅಥವಾ ಗ್ರಹಚಾರ ಮಂತ್ರಿಯಾ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
‘ಬಿಜೆಪಿಯವರು ಸತ್ತಿದ್ರಾ?’
ಬಿಜೆಪಿ ನಾಯಕರ ನಡೆಯನ್ನು ತೀವ್ರವಾಗಿ ಖಂಡಿಸಿದ ತಿಮರೋಡಿ, “ಅವತ್ತು ಇದೇ ಹರೀಶ್ ಪೂಂಜಾನವರ ಮೇಲೆ ಜಿ.ಪಂ. ಸದಸ್ಯರೊಬ್ಬರು ಕೇಸ್ ಮಾಡಿದ್ದಾಗ ಬಿಜೆಪಿಯವರು ಸತ್ತಿದ್ರಾ? ಉತ್ತರ ಕೊಡಬೇಕಲ್ವಾ?” ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಇದೇ ಹರೀಶ್ ಪೂಂಜಾ ವಿಧಾನಸಭೆಯೊಳಗೆ ಇರುವಾಗ ಬಿಜೆಪಿ ನಾಯಕರು ಯಾಕೆ ಮಾತಾಡಲಿಲ್ಲ ಎಂದು ತಿಮರೋಡಿ ತರಾಟೆಗೆತ್ತಿಕೊಂಡಿದ್ದಾರೆ.