
ಉಡುಪಿ : ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಭಾಷೆಯ ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಅವುಗಳು ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಹೋಂ ಗಾರ್ಡ್ ಸಂಪತ್ ಸಾಲಿಯಾನ್‌ನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ‘ಸಿದ್ದರಾಮಯ್ಯನನ್ನು ಕೊಂದರೆ ಹಿಂದೂಗಳಿಗೆ ನೆಮ್ಮದಿ’ ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ ಪ್ರಕರಣವು ಇದೀಗ ಗಂಭೀರ ತಿರುವು ಪಡೆದಿದೆ.
ಬಂಧಿತ ಸಂಪತ್ ಸಾಲಿಯಾನ್, ಬೆಂಗಳೂರು ಹೋಂ ಗಾರ್ಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರದ ವಿರುದ್ಧ ದ್ವೇಷಭರಿತ ಉಲ್ಲೇಖ ಮಾಡಿರುವ ಹಿನ್ನೆಲೆಯಲ್ಲಿಅವರ ವಿರುದ್ದ ಕ್ರಮಕೈಗೊಳ್ಳಲಾಗಿದೆ.
ಇದಕ್ಕೆ ಜೊತೆಯಾಗಿಯೇ, ಧನುಷ್.ಸಿ ಎಂಬ ಯುವಕ ಫೇಸ್‌ಬುಕ್‌ನಲ್ಲಿ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿದ್ದು, ಅಲ್ಲಿ “ಸುಹಾಸ್ ಶೆಟ್ಟಿಯನ್ನು ಕೊಂದವರ ಮನೆ ಹುಡುಕಿ ಕೊಲ್ಲುತ್ತೇವೆ” ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಠಾಣೆಯಲ್ಲಿ BNS 196(1)(A), 353(1)(C) ಅಡಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿರುವುದರೊಂದಿಗೆ ತನಿಖೆ ಮುಂದುವರೆದಿದೆ. ದಕ್ಷಿಣ ಕನ್ನಡದ ಜನರಲ್ಲಿ ಆತಂಕದ ಪರಿಸ್ಥಿತಿ ಇದ್ದರೂ, ಪೊಲೀಸರು ಪ್ರಚೋದನಾತ್ಮಕ ವೀಕ್ಷಣೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.