
ಹಿರಿಯಡ್ಕ: ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ನೆನಪಿನಲ್ಲಿ ಆಚರಿಸಲಾಗುವ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಹಿರಿಯಡ್ಕದ ಕೆ.ಪಿ.ಎಸ್. ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಸಾಯನಶಾಸ್ತ್ರ ಉಪನ್ಯಾಸಕ ಶ್ರೀಯುತ ನವನೀತ್ ಅರಸ್ ಅವರು ಮಾತನಾಡಿ, “ಮುಂದಿನ ಪೀಳಿಗೆಯ ಮೇಲೆ ತಂತ್ರಜ್ಞಾನದ ಜವಾಬ್ದಾರಿ ಹೆಚ್ಚಿದೆ. ಅದನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವುದು ಇಂದಿನ ಅಗತ್ಯ,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಈ ವರ್ಷದ ಧ್ಯೇಯವಾಕ್ಯವಾದ “Women in Science: Catalysing Viksit Bharat” (ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತದ ವೇಗವರ್ಧಕಗಳು) ಕುರಿತು ವಿವರಿಸುತ್ತಾ, ದೇಶದ ಪ್ರಗತಿಯಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ಅಮೂಲ್ಯವಾದುದು ಎಂದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಮಾಣ ವಚನ ಬೋಧಿಸಲಾಯಿತು. ವಿಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವುದು, ಮೂಢನಂಬಿಕೆಗಳನ್ನು ದೂರ ಮಾಡುವುದು ಮತ್ತು ಅನ್ವೇಷಣಾ ಮನೋಭಾವ ಮೈಗೂಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳು ಸಂಕಲ್ಪ ಮಾಡಿದರು.
ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ ಭಟ್ ಅವರು ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಕುತೂಹಲ ಬೆಳೆಯಬೇಕು. STEAM ಆಧಾರಿತ ಕಲಿಕೆಯು ವಿಜ್ಞಾನ ದಿನಾಚರಣೆಗೆ ನಿಜವಾದ ಅರ್ಥವನ್ನು ನೀಡುತ್ತದೆ,” ಎಂದು ಅಭಿಪ್ರಾಯಪಟ್ಟರು.

ವಿಶೇಷ ಆಕರ್ಷಣೆ: ಅಟಲ್ ಟಿಂಕರಿಂಗ್ ಲ್ಯಾಬ್‌ನ ಮೆಂಟರ್‌ಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು.
ಉಪಸ್ಥಿತಿ: ಕಾಲೇಜು ಅಭಿವೃದ್ಧಿ ಸಮಿತಿಯ ಶ್ರೀಯುತ ಬಿ.ಎಲ್. ವಿಶ್ವಾಸ್ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಉಪನ್ಯಾಸಕಿ ಶ್ರೀಮತಿ ವೀಣಾ ಡಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಪ್ರಭು ಸ್ವಾಗತಿಸಿ, ಹಿಂದಿ ಶಿಕ್ಷಕರಾದ ಶ್ರೀ ರವೀಂದ್ರ ಪ್ರಭು ವಂದಿಸಿದರು. ವಿಜ್ಞಾನ ಶಿಕ್ಷಕ ಶ್ರೀ ರಾಘವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೋಡಲ್ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮತ್ತು ಚಿತ್ರಕಲಾ ಶಿಕ್ಷಕ ಶ್ರೀಯುತ ಮೋಹನ್ ಕಡಬ ಉಪಸ್ಥಿತರಿದ್ದರು.



































