
ಹಿರಿಯಡಕ: ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ಆವರಣದಲ್ಲಿ ಭಾರತದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿಯ ಭಾವದೊಂದಿಗೆ ಆಚರಿಸಲಾಯಿತು. ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ದಿನದಂದು ಶಿಸ್ತುಬದ್ಧ ಪಥಸಂಚಲನ ಹಾಗೂ ಸಾಂಸ್ಕೃತಿಕ ಮೆರುಗು ಎದ್ದು ಕಾಣುತ್ತಿತ್ತು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ವಹಿಸಿದ್ದ ಭಾರತೀಯ ವಾಯುಪಡೆಯ ನಿವೃತ್ತ ಸೇನಾಧಿಕಾರಿ ಸುಭಾಶ್ ಕೆ. ಅವರು ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು. ಬಳಿಕ ಮಾತನಾಡಿದ ಅವರು, ದೇಶದ ರಕ್ಷಣೆ ಮತ್ತು ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ದೊಡ್ಡದಿದೆ. ಗಣರಾಜ್ಯದ ಆಶಯಗಳನ್ನು ಯುವಜನತೆ ಎತ್ತಿ ಹಿಡಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಯುವ ನ್ಯಾಯವಾದಿಯಾಗಿರುವ ಆತ್ರಾಡಿ ಕೃಷ್ಣರಾಜ ಹೆಗ್ಡೆ ಅವರು ಸಂವಿಧಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. “ನಾನು ಕಲಿತ ಶಾಲೆಯಲ್ಲೇ ಅತಿಥಿಯಾಗಿ ಭಾಗವಹಿಸುತ್ತಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಸಂವಿಧಾನವು ನಮಗೆ ನೀಡಿದ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದು ಅನಿವಾರ್ಯ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಕೋಲಸ್, ಉಪ ಪ್ರಾಂಶುಪಾಲೆ ಜಯಶ್ರೀ ತೆಂಡುಲ್ಕರ್, ಆಡಳಿತಾಧಿಕಾರಿ ಶೇಖರ ಗುಜ್ಜರ ಬೆಟ್ಟು ಉಪಸ್ಥಿತರಿದ್ದರು. ಸಂಯೋಜಕಿಯರಾದ ಗೀತಾ ಭಟ್, ಶಾಲಾ ವ್ಯವಸ್ಥಾಪಕಿ ಅಮಿತಾ ಹೆಗ್ಡೆ, ಕಾರ್ಯಕ್ರಮ ನಿರ್ದೇಶಕಿ ಅನುಷಾ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿಗಳಾದ ವಿಶೃತ್, ರತನ್ ಮತ್ತು ಅದಿತಿ ಪೂಜಾರಿ ಸಂವಿಧಾನ ಮತ್ತು ದೇಶದ ಕುರಿತು ಅನಿಸಿಕೆ ಹಂಚಿಕೊಂಡರು. ಕುಮಾರಿ ಸಾನಿಕ ಕಾರ್ಯಕ್ರಮ ನಿರೂಪಿಸಿದರು, ಪ್ರನ್ವಿ ಸ್ವಾಗತಿಸಿದರು ಮತ್ತು ಅದಿತಿ ಜಿ. ಪೂಜಾರಿ ಮತ್ತು ತನ್ವಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಮಾನ್ವಿ ಯು. ವಂದಿಸಿದರು.



































