
ಹಿರಿಯಡ್ಕ: ಕಣಜಾರು ಸಮೀಪದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ನಿನ್ನೆ ರಾತ್ರಿ (ಆಗಸ್ಟ್ 31) ನಡೆದ ಘಟನೆಯಲ್ಲಿ, ಕಾಡುಹಂದಿ ಬೇಟೆಗಾರರ ಅಜಾಗರೂಕತೆಯಿಂದಾಗಿ ಗುರಿ ತಪ್ಪಿದ ಗುಂಡು, ಅಲ್ಲೇ ನಿಲ್ಲಿಸಿದ್ದ ಕಾರು ಮತ್ತು ಮನೆಯೊಂದರ ಬಾಗಿಲಿಗೆ ಬಡಿದು ಗೋಡೆಗೂ ಹಾನಿಯಾಗಿದೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮಸ್ಥರ ಹೇಳಿಕೆಯಂತೆ, ಆ ರಾತ್ರಿ ಅಪರಿಚಿತ ವ್ಯಕ್ತಿಗಳು ನಾಡಿಗೆ ನುಗ್ಗಿದ ಹಂದಿಯನ್ನು ಬೇಟೆಯಾಡಲು ಬಂದೂಕು ಬಳಸಿದ್ದಾರೆ. ಆದರೆ, ಹಂದಿಗೆ ಹಾರಿಸಿದ ಗುಂಡು ಗುರಿ ತಪ್ಪಿ ಸಮೀಪದ ನಿವಾಸಿ ಕಣಜಾರು ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುರಾಜ ಮಂಜಿತ್ತಾಯ ಎಂಬವರ ಮನೆಯತ್ತ ನುಗ್ಗಿದೆ.

ಮೊದಲಿಗೆ, ಗುಂಡು ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಬದಿಗೆ ಬಡಿದು , ನಂತರ ಮನೆಯ ಮರದ ಬಾಗಿಲಿಗೆ ತಗುಲಿ ಮನೆಯ ಒಳಗೆ ನುಸುಳಿದೆ. ರಾತ್ರಿ ವೇಳೆಯಲ್ಲಿ ಶಬ್ದ ಕೇಳಿ ಎಚ್ಚೆತ್ತ ಮನೆಯವರು ಆತಂಕಗೊಂಡು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ನಮ್ಮ ವರದಿಗಾರರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಹಾನಿಯಾದ ಕಾರು ಮತ್ತು ಮನೆಯ ಬಾಗಿಲು , ಗೋಡೆಯ ಸ್ಥಿತಿ ಭಯಾನಕವಾಗಿತ್ತು. ರಾತ್ರಿ ವೇಳೆ ಯಾವುದೇ ಪ್ರಾಣಹಾನಿಯಾಗದಿರುವುದು ಅದೃಷ್ಟ. ಅಕ್ರಮ ಬೇಟೆಯಂತಹ ಕೃತ್ಯಗಳು ಜನವಸತಿ ಪ್ರದೇಶಗಳಲ್ಲಿ ಅಪಾಯ ತಂದೊಡ್ಡುತ್ತಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರಕಾರ, ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಹಿರಿಯಡ್ಕ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಕಾನೂನುಬಾಹಿರವಾಗಿ ಬೇಟೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಈ ಘಟನೆಯು ರಾತ್ರಿ ವೇಳೆ ಬೇಟೆಯಂತಹ ಚಟುವಟಿಕೆಗಳು ನಾಗರಿಕ ಪ್ರದೇಶಗಳಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.