
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಹಿಂದೂ ಸಂಘಟನೆಯ ಮುಖಂಡ ಭರತ್ ಕುಮ್ಡೇಲು ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಸಂದೇಶವೊಂದು ಹರಿದಾಡಿದ್ದು, ಆತಂಕ ಮೂಡಿಸಿದೆ.
ಇತ್ತೀಚೆಗಷ್ಟೇ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಈ ಹತ್ಯೆಯ ನಂತರ ಅನೇಕ ಹಿಂದೂ ಮುಖಂಡರು ಟಾರ್ಗೆಟ್ ಆಗುತ್ತಿರುವ ಶಂಕೆ ಮೂಡಿದ ಹಿನ್ನೆಲೆ, ಭರತ್ ಕುಮ್ಡೇಲು ಅವರು ತಮಗೆ ಬಂದ ಬೆದರಿಕೆಯ ಕುರಿತು ಮಾಹಿತಿ ನೀಡಿದ ನಂತರ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೊಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ “ಆನ್ ಫಿಕ್ಸ್ ಲೀಡರ್” ಎಂಬ ಖಾತೆಯಿಂದ, ಭರತ್ ಅವರನ್ನು ಕೆಟ್ಟ ಹೆಸರಿಗೆ ದೂಡಲು ಹಾಗೂ ಆತಂಕ ಸೃಷ್ಟಿಸಲು ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯ ಸ್ಪೆಷಲ್ ಬ್ರಾಂಚ್‌ನಲ್ಲಿ ಕರ್ತವ್ಯದಲ್ಲಿರುವ ಎಎಸ್‌ಐ ಕೃಷ್ಣ ನಾಯ್ಕ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಪೋಸ್ಟ್ ಮಾಡುವ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಹಾಗೂ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮಧ್ಯೆ, ಹಿಂದೂ ಮುಖಂಡರಿಗೆ ಭದ್ರತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.