
ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿತರಾಗಿದ್ದ ಪುನೀತ್ ಕೆರೆಹಳ್ಳಿಗೆ ನ್ಯಾಯಾಲಯದಿಂದ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಒಂದು ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದ್ದರೆ, ಮತ್ತೊಂದು ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಾಲಯದಲ್ಲಿ ನಡೆದಿದ್ದೇನು?
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದೆ. “ನಗರದ ಹಲವೆಡೆ ಅಕ್ರಮ ವಲಸಿಗರು ಆಶ್ರಯ ಪಡೆದಿರುವುದು ಸತ್ಯ. ಸಾರ್ವಜನಿಕರು ಅಂತಹವರನ್ನು ಪತ್ತೆ ಹಚ್ಚಿ ತೋರಿಸಿದಾಗ ಅವರ ವಿರುದ್ಧವೇ ಕೇಸ್ ದಾಖಲಿಸುವುದು ಸರಿಯೇ?” ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ವಲಸಿಗರನ್ನು ಹೊರಹಾಕಲು ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದೆ.
ಘಟನೆಯ ಹಿನ್ನೆಲೆ:
ಕೆಲವು ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್. ಬಿಂಗೀಪುರ ಎಂಬಲ್ಲಿ ಶಂಕಿತ ಬಾಂಗ್ಲಾ ಮೂಲದ ವ್ಯಕ್ತಿಗಳು ವಾಸವಿದ್ದಾರೆ ಎಂಬ ಮಾಹಿತಿ ಮೇರೆಗೆ ಪುನೀತ್ ಕೆರೆಹಳ್ಳಿ ಮತ್ತು ತಂಡ ದಾಳಿ ನಡೆಸಿತ್ತು. ಅಲ್ಲಿನ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದ ತಂಡವು, ಅಕ್ರಮವಾಗಿ ನೆಲೆಸಿದ್ದಾರೆಂಬ ಆರೋಪದ ಮೇಲೆ ಪೊಲೀಸರಿಗೆ ಹಸ್ತಾಂತರಿಸಿತ್ತು. ಆದರೆ, ಸ್ಥಳದ ಮಾಲೀಕ ಸಿದ್ದೇಶ್ ಎಂಬುವವರು ಪುನೀತ್ ಮತ್ತು ಅವರ ತಂಡದ ವಿರುದ್ಧ ಬೆದರಿಕೆ ಹಾಗೂ ಅತಿಕ್ರಮ ಪ್ರವೇಶದ ದೂರು ನೀಡಿದ್ದರು.
ಈ ದೂರಿನ ಅನ್ವಯ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಮಧ್ಯರಾತ್ರಿ ಬಂಧಿಸಿದ್ದರು. ಈ ಬಂಧನವು ತೀವ್ರ ಜನಾಗ್ರಹಕ್ಕೆ ಕಾರಣವಾಗಿತ್ತು. ಬಳಿಕ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಹೈಕೋರ್ಟ್ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕುವ ಮೂಲಕ ಪುನೀತ್ ಅವರಿಗೆ ಆನೆಬಲ ನೀಡಿದೆ.



































