
ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಯುವಕನೊಬ್ಬ ಭಾರತೀಯ ರಕ್ಷಣಾ ರಂಗದ ಅತ್ಯುನ್ನತ ಮತ್ತು ಅತ್ಯಂತ ಕಠಿಣ ಪಡೆಯಾದ ‘ಎನ್‌ಎಸ್‌ಜಿ’ (ರಾಷ್ಟ್ರೀಯ ಭದ್ರತಾ ಪಡೆ) ಕಮಾಂಡೋ ಆಗಿ ನೇಮಕಗೊಳ್ಳುವ ಮೂಲಕ ಕರಾವಳಿಯ ಹೆಮ್ಮೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಬ್ರಿಯ ನಿವಾಸಿ ಸಚಿನ್ ಶೆಟ್ಟಿ ಅವರು, ಸೈನಿಕರಲ್ಲಿಯೂ ಅತ್ಯಂತ ಪ್ರತಿಭಾವಂತರಿಗೆ ಮಾತ್ರ ಲಭಿಸುವ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದೇಶದ ಆಂತರಿಕ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಈ ಯುವ ಯೋಧನ ಸಾಧನೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಂಬೈ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಅಪ್ರತಿಮ ಸಾಹಸ ತೋರಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಂತಹ ವೀರರ ಹಾದಿಯಲ್ಲಿ ಸಾಗಿರುವ ಸಚಿನ್ ಶೆಟ್ಟಿ, ಈಗ ದೇಶದ ವಿವಿಐಪಿಗಳ ರಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹ ಪಡೆಯ ಅವಿಭಾಜ್ಯ ಅಂಗವಾಗಿದ್ದಾರೆ.



































