
ಹೆಬ್ರಿ ತಾಲೂಕು ಕುಲಾಲ ಸಂಘದ (ರಿ) ವಾರ್ಷಿಕ ಮಹಾಸಭೆಯ ಅಂಗವಾಗಿ ಭಾನುವಾರ ದಿನಾಂಕ 21.12.2025 ರಂದು ಆಯೋಜಿಸಲಾಗಿದ್ದ ಬೃಹತ್ ಬೈಕ್ ರ‍್ಯಾಲಿಯು ಸಮಾಜದ ಒಗ್ಗಟ್ಟನ್ನು ಪಸರಿಸುವಲ್ಲಿ ಯಶಸ್ವಿಯಾಯಿತು. ಬೆಳಿಗ್ಗೆ 10.30ಕ್ಕೆ ಸ್ಥಳೀಯ ಬಂಟರ ಭವನದಿಂದ ಚಾಲನೆ ಪಡೆದ ಈ ಮೆರವಣಿಗೆಗೆ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಅವರು ಹಸಿರು ನಿಶಾನೆ ತೋರಿದರು. ನೂರಾರು ಯುವಕರು ಪಾಲ್ಗೊಂಡಿದ್ದ ಈ ರ‍್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಮುಕ್ತಾಯಗೊಂಡಿತು.
ಬಳಿಕ ಬೆಳಿಗ್ಗೆ 11.30ಕ್ಕೆ ಸಭಾಭವನದಲ್ಲಿ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಭೋಜ ಕುಲಾಲ್ ಬೇಳಂಜೆ ಅವರು, ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಸ್ವಂತ ನಿವೇಶನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಮತ್ತೊಬ್ಬ ಪ್ರಮುಖರಾದ ಐತು ಕುಲಾಲ್ ಅವರು ಮಾತನಾಡಿ, “ವಿದ್ಯಾದಾನಕ್ಕಿಂತ ಮಿಗಿಲಾದ ದಾನ ಮತ್ತೊಂದಿಲ್ಲ, ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು” ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್ ಕುಲಾಲ್ ಅವರು, ಮನುಷ್ಯನ ಜೀವನದಲ್ಲಿ ಸಂಘಟನೆಯ ಮೌಲ್ಯಗಳು ಮತ್ತು ನೈತಿಕತೆ ಬಹಳ ಮುಖ್ಯ ಎಂದು ತಿಳಿಸಿದರು. ಕಾರ್ಕಳದ ಹರಿಶ್ಚಂದ್ರ ಕುಲಾಲ್ ಮಾತನಾಡಿ, ಸಂಸ್ಥೆಯ ಬೆಳವಣಿಗೆ ಎಂಬುದು ಕೇವಲ ಪದಾಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ, ಪ್ರತಿಯೊಬ್ಬ ಸದಸ್ಯರ ಸಹಕಾರವಿದ್ದಾಗ ಮಾತ್ರ ಸಂಘವು ಮಾದರಿಯಾಗಿ ಬೆಳಗಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುರೇಂದ್ರ ಕುಲಾಲ್ ವರಂಗ ಅವರು ಮಾತನಾಡಿ, ಬೈಕ್ ರ‍್ಯಾಲಿ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಹೆಬ್ರಿ ತಾಲೂಕಿನ ಎಲ್ಲಾ ಕುಲಾಲ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ವಿಜೇತ್ ಕುಲಾಲ್, ರಮೇಶ್ ಕುಲಾಲ್, ಶಿವಪುರದ ವಾಸುದೇವ ಕುಲಾಲ್, ಕಬ್ಬಿನಾಲೆಯ ಸೀತಾರಾಮ್ ಕುಲಾಲ್, ಮುದ್ರಾಡಿಯ ಸುರೇಶ್ ಕುಲಾಲ್, ಬೆಪ್ದೆಯ ಸುಮಿತ್ರ ಕುಲಾಲ್ ಹಾಗೂ ಐತು ಕುಲಾಲ್ ಉಪಸ್ಥಿತರಿದ್ದರು.



































