
ಹೆಬ್ರಿ: ಸತ್ಯ ಮತ್ತು ಅಹಿಂಸೆಯ ದೀಪವನ್ನು ಬೆಳಗಿಸಿದ ಮಹಾನ್ ಶಕ್ತಿ ಮಹಾತ್ಮ ಗಾಂಧೀಜಿಯವರು. ಭಾರತವು ಸ್ವಾತಂತ್ರ್ಯವನ್ನು ಪಡೆಯಲು ಅವರು ಅನುಸರಿಸಿದ ಸತ್ಯಾಗ್ರಹ ಹಾಗೂ ಅಸಹಕಾರ ಚಳುವಳಿ ಜಗತ್ತಿನ ಇತರ ದೇಶಗಳಿಗೂ ಮಾದರಿಯಾಗಿರುವುದು ಗಾಂಧೀಜಿಯವರು ಭಾರತಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಅಸ್ಪೃಶ್ಯತೆ ನಿರ್ಮೂಲನೆ, ಸ್ವಚ್ಛತೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ತುಂಬಾ ಮಹತ್ವವನ್ನು ನೀಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಯವರು ದೇಶದ ಉತ್ತಮ ಆಡಳಿತಗಾರರಾಗಿ, ದೇಶದ ಪ್ರಧಾನಮಂತ್ರಿಯಾಗಿ ದೇಶಸೇವೆಯಲ್ಲೇ ತೊಡಗಿಸಿಕೊಂಡ ಮಹಾನ್ ನಾಯಕ. ಗಾಂಧೀಜಿಯವರ ತತ್ವಗಳನ್ನು ಹಾಗೂ ಶಾಸ್ತ್ರೀಜಿಯವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕೆಂದು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ತಮ್ಮ ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಶಿಕ್ಷಕರಾದ ಮಹೇಶ್ ನಾಯ್ಕ್, ಶ್ಯಾಮಲಾ, ರಘುಪತಿ ಹೆಬ್ಬಾರ್ ಹಾಗೂ ಮಹೇಶ್ ಕಾನ್ಗುಂಡಿ, ರಘುನಂದನ್,ವಿದ್ಯಾರ್ಥಿ ನಾಯಕ ಕಾರ್ತಿಕ್, ಉಪನಾಯಕ ಪ್ರತೀಕ್, ತರಗತಿ ಪ್ರತಿನಿಧಿಗಳಾದ ಮಣಿಕಂಠ, ಯಕ್ಷಿತ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹಾ ಸ್ವಾಗತಿಸಿ, ಲಾವಣ್ಯ ವಂದಿಸಿದರು.