
ಹಾಸನ: ಸಕಲೇಶಪುರ ಪಟ್ಟಣ ಸೇರಿದಂತೆ ಹಾಸನ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಕಲೇಶಪುರದ ಅರೇಹಳ್ಳಿ ರಸ್ತೆಯ ಗ್ಯಾಸ್ ಗೋಡೌನ್ ಬಳಿಯಲ್ಲಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಜ್ಯ ಹೆದ್ದಾರಿ ಮತ್ತು ಒಳನಾಡು ರಸ್ತೆಗಳ ಸ್ಥಿತಿಯು ಅತ್ಯಂತ ಕಷ್ಟಕರವಾಗಿದೆ. ಬೇಲೂರು–ಸಕಲೇಶಪುರ ರಾಜ್ಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದೆ. ಈ ಸ್ಥಿತಿ ಮುಂದುವರೆದರೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿಯಿದೆ.
ಭೂಕುಸಿತದ ಪರಿಣಾಮವಾಗಿ ಮರಗಳು, ಗಿಡಗಳು ರಸ್ತೆಗೆ ಉರುಳುತ್ತಿರುವ ಘಟನೆಗಳು ನಡೆದಿದ್ದು, ವಾಹನ ಸವಾರರು ಆತಂಕದ ನಡುವೆ ಸಂಚರಿಸುತ್ತಿದ್ದಾರೆ.
NH 75ರಲ್ಲಿ ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಬಳಿ ಸಂಭವಿಸಿದ ಭೂಕುಸಿತ ಪ್ರದೇಶಕ್ಕೆ ಸಹಾಯಕ ಆಯುಕ್ತೆ ಶೃತಿ ಹಾಗೂ ತಹಸೀಲ್ದಾರ್ ಅರವಿಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಣ್ಣು ತೆರವು ಕಾರ್ಯಾಚರಣೆಗೆ ಇಟಾಚಿ ಯಂತ್ರದ ನೆರವಿನಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ರಸ್ತೆ ಎರಡೂ ಬದಿಗಳಲ್ಲೂ ವಾಹನಗಳನ್ನು ತಡೆಹಿಡಿದು ಸುರಕ್ಷಿತವಾಗಿ ತೆರವು ಕಾರ್ಯ ನಡೆಯುತ್ತಿದೆ. ಮಳೆ ಮತ್ತು ಭೂಕುಸಿತದ ಹಿನ್ನಲೆಯಲ್ಲಿ ಸಕಲೇಶಪುರ–ಬೆಂಗಳೂರು–ಮಂಗಳೂರು ಸಂಪರ್ಕದ ಹೆದ್ದಾರಿ ಸಂಪರ್ಕದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.