
ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯ ಅಬ್ಬರ ಕಡಿಮೆಯಾದರೂ ಅದರ ಪರಿಣಾಮಗಳು ಇನ್ನೂ ಸರಿಯಾಗಿಲ್ಲ. ಮಳೆನೀರು ಮನೆಗಳಿಗೆ ನುಗ್ಗಿದ ಹಾನಿಯೊಂದಿಗೆ ರಸ್ತೆಗಳ ಮೇಲೆ ನಿಂತ ನೀರಿನಿಂದ ಅನೇಕ ಕಾರುಗಳು ಹಾಗೂ ಬೈಕುಗಳು ನಾಶವಾಗಿದೆ.
ಮಳೆ ನೀರಲ್ಲಿ ಮುಳುಗಿ ಹಾನಿಗೊಳಗಾದ ಕಾರುಗಳ ಮೌಲ್ಯವು ಗಮನಾರ್ಹವಾಗಿ ಕುಸಿದಿದೆ. ಹಲವರು ತಮ್ಮ ವಾಹನಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಬೊಲೆರೋ ಕಾರಿನ ಮಾಲಿಕ ಉದಯ ಎಂಬುವವರು , ಹನ್ನೆರಡು ಲಕ್ಷ ಮೌಲ್ಯದ ಕಾರನ್ನು ಕೇವಲ 6.8 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಕೃಷ್ಣ ಎಂಬುವವರು 10 ಸಾವಿರ ಕಿಮಿ ಓಡಿದ ಝನ್ ಕಾರನ್ನು ಕೇವಲ 70 ಸಾವಿರಕ್ಕೆ ನೀಡಿದರೆ, ಸುನಿಲ್ ಎಂಬುವವರು ಹೋಂಡಾ ಸಿಟಿ (18-20 ಲಕ್ಷ ಮೌಲ್ಯ) ಕೇವಲ 7 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
ಕಳೆದ ವರ್ಷವೂ ಯಲಹಂಕದ ಕೇಂದ್ರಿಯ ಅಪಾರ್ಟ್‌ಮೆಂಟ್ ಮಳೆಗೆ ನಲುಗಿ ಹೋಗಿದ್ದು, 2500 ಜನರನ್ನು ಸ್ಥಳಾಂತರಿಸಲಾಗಿತ್ತು. 300 ಕ್ಕೂ ಹೆಚ್ಚು ಕಾರುಗಳು ಮುಳುಗಡೆಯಾಗಿದ್ದವು. ಅವುಗಳಿಗೆ ವಿಮೆ ದೊರಕದ ಕಾರಣ ಮಾಲೀಕರಿಗೆ ಮತ್ತಷ್ಟು ನಷ್ಟ ಉಂಟಾಗಿತ್ತು.
ಈ ವರ್ಷದ ಮುಂಗಾರು ಮಳೆಯಿಂದ ಸಾಯಿ ಲೇಔಟ್, ಕೋರಮಂಗಲ, ಬಿಟಿಎಂ ಲೇಔಟ್, ಹೆಚ್‌ಬಿಆರ್ ಲೇಔಟ್ ಸೇರಿ ಹಲವಾರು ಪ್ರದೇಶಗಳ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿದ್ದು, ವಾಹನ ಮಾಲೀಕರಿಗೆ ಭಾರೀ ತೊಂದರೆ ಉಂಟಾಗಿದೆ.
ಪ್ರತಿ ವರ್ಷ ಮಳೆ ಬಂದಾಗ ಬರುವ ಈ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಜನರು ಅನೇಕ ಬಾರಿ ಮನವಿ ಮಾಡಿದ್ದರೂ, ಅಧಿಕಾರಿಗಳಿಂದ ಸೂಕ್ತ ಕ್ರಮ ಇಲ್ಲದೆ ಮಳೆಗಾಲ ಒಂದು ಭೀತಿಗಾಲವಾಗುತ್ತಿದೆ.




































