
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ಕುರಿತ ವಿಚಾರಣೆ ಬುಧವಾರ 64ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು, ನ್ಯಾಯಾಲಯ ತನ್ನ ಆದೇಶವನ್ನು ಸೆಪ್ಟೆಂಬರ್ 9 ಕ್ಕೆ ಕಾಯ್ದಿರಿಸಿದೆ.
ದರ್ಶನ್ ಪರ ವಾದ ಮಂಡನೆ
ದರ್ಶನ್ ಪರ ವಕೀಲ ಸುನೀಲ್ ಅವರು ನ್ಯಾಯಾಲಯದಲ್ಲಿ ಹಲವು ಪ್ರಮುಖ ಅಂಶಗಳನ್ನು ಮುಂದಿಟ್ಟರು. ವಿಚಾರಣಾಧೀನ ಕೈದಿಗಳನ್ನು ವರ್ಗಾವಣೆ ಮಾಡಲು ಜೈಲು ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಯಾವುದೇ ಅಧಿಕಾರವಿಲ್ಲ ಎಂದು ವಾದಿಸಿದರು. ಇದೇ ವೇಳೆ, 2024ರಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ವರ್ಗಾಯಿಸಲು ಪ್ರಯತ್ನಿಸಿದಾಗ ಕೆಲವು ಜೈಲು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿತ್ತು ಆದರೆ ಅದನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದರು.
ಜೈಲು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ:
ಆಗಸ್ಟ್ 23, 2024 ರಂದು ಸಿಸಿಬಿ ಜೈಲಿನಲ್ಲಿ ನಡೆಸಿದ ದಾಳಿಯ ವೇಳೆ ಕೆಲವು ವಸ್ತುಗಳನ್ನು ಅಧಿಕಾರಿಗಳೇ ಸರಬರಾಜು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ಅಮಾನತುಗೊಳಿಸಲಾಗಿದೆ. ಆದರೆ, ದರ್ಶನ್ ಅವರೊಂದಿಗೆ ಜೈಲಿನಲ್ಲಿ ಕಂಡುಬಂದವರ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಕೀಲರು ವಾದ ಮಂಡಿಸಿದರು.
ವರ್ಗಾವಣೆಯ ಹಿಂದಿನ ಕಾರಣದ ಬಗ್ಗೆ ಪ್ರಶ್ನೆ
“ಕೇಂದ್ರ ಜೈಲಿನಲ್ಲಿ ಸಾವಿರಾರು ಕೈದಿಗಳಿದ್ದಾರೆ, ಆದರೆ ಅವರನ್ನು ವರ್ಗಾವಣೆ ಮಾಡಲು ಜೈಲು ಅಧಿಕಾರಿಗಳು ಕೋರುವುದಿಲ್ಲ. ಆದರೆ ದರ್ಶನ್ ಅವರನ್ನೇ ಏಕೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತಿದೆ?” ಎಂದು ವಕೀಲ ಸುನೀಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಅಲ್ಲದೆ, ದರ್ಶನ್ ಅವರನ್ನು ವರ್ಗಾಯಿಸಲು ಬೇರೆ ಜೈಲುಗಳು ನಿರಾಕರಿಸುತ್ತಿವೆ. ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅವರೀಗ ಕಾರಾಗೃಹ ಇಲಾಖೆ ಡಿಜಿಯಾಗಿದ್ದು, ಅವರ ಸೂಚನೆಯ ಮೇರೆಗೆ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿದರು. ಅಲ್ಲದೆ, ವಿಚಾರಣೆ ನಡೆಯುವಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವುದು ಸೂಕ್ತವಲ್ಲ ಎಂದೂ ಹೇಳಿದರು.
ಅರ್ಜಿ ವಿಚಾರಣೆ ಮುಂದೂಡಿಕೆ
ದರ್ಶನ್ ಪರ ವಕೀಲರ ವಾದ ಮತ್ತು ಜೈಲು ಅಧಿಕಾರಿಗಳ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ತನ್ನ ತೀರ್ಪನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ. ದರ್ಶನ್ ಅವರ ವರ್ಗಾವಣೆಯಾಗುತ್ತದೆಯೋ ಅಥವಾ ಇಲ್ಲವೋ ಎಂಬುದು ಅಂದು ನಿರ್ಧಾರವಾಗಲಿದೆ. ಇದೇ ವೇಳೆ, ಜೈಲಿನಲ್ಲಿ ದರ್ಶನ್ ಅವರಿಗೆ ಎರಡು ದಿಂಬುಗಳು, ಎರಡು ಬೆಡ್‌ಶೀಟ್‌ಗಳು ಮತ್ತು ಹೆಚ್ಚುವರಿ ಬಟ್ಟೆಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.