
ತುಮಕೂರು : ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅವರು ಆರೆಸ್ಸೆಸ್ ಗೀತೆ ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು, ಅಂಬಾನಿ ಮಗನ ಮದುವೆಯಲ್ಲೂ ಭಾಗವಹಿಸಬಹುದು, ಆದರೆ ನಾವು ಮಾಡಿದರೆ ಮಾತ್ರ ತಪ್ಪು ಎನ್ನುವುದು ವೈರುಧ್ಯ. ಇದಕ್ಕೆ ಕಾಲವೇ ಉತ್ತರ ನೀಡಲಿದೆ” ಎಂದು ರಾಜಣ್ಣ ಟೀಕಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುವಾದಿಗಳಿಗೆ ಬೆಂಬಲ ನೀಡುವ ಅಂಬಾನಿ ಮಗನ ಮದುವೆಗೆ ಹೋಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರೂ ಡಿಕೆಶಿ ಭಾಗವಹಿಸಿದ್ದಾರೆ. ಜೊತೆಗೆ, ಎಐಸಿಸಿ ಅಧ್ಯಕ್ಷರೇ ಕುಂಭಮೇಳದ ಬಗ್ಗೆ ಪ್ರಶ್ನಿಸಿದ್ದರೂ, ಕುಟುಂಬ ಸಮೇತ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ. ಇಷ್ಟೆಲ್ಲಾ ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೂ ಅದು ಸರಿಯೇ? ಎಂದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ಆರೆಸ್ಸೆಸ್ ಗೀತೆಯನ್ನು ಸದನದಲ್ಲಿ ಹಾಡುತ್ತಾರೆ. ಸದನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಶಾಸಕರ ಸಭೆ ನಡೆಸಬಹುದು, ಆದರೆ ನಾವು ನಡೆಸಿದರೆ ಅದು ಅಪರಾಧವಾಗುತ್ತದೆ. ಈ ಎಲ್ಲಾ ವೈರುಧ್ಯಗಳಿಗೆ ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ರಾಜಣ್ಣ ತಮ್ಮ ಅಸಮಾಧಾನವನ್ನು ಹೊರಹಾಕಿದರು.