

ರಾಯಚೂರು: ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ ಮೊದಲ ಬಾರಿಗೆ ಮಂತ್ರಾಲಯಕ್ಕೆ ಪತ್ನಿ ಗೀತಾ ಸಮೇತ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.
ರವಿವಾರ (ಫೆಬ್ರವರಿ.24) ರಾತ್ರಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಅವರು ಶ್ರೀ ಮಠಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಪ್ರಣಾಮ ಸಲ್ಲಿಸಿದರು. ಬಳಿಕ, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದ್ದು, ಶ್ರೀಗಳು ಅವರ ಆರೋಗ್ಯದ ಬಗ್ಗೆ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭ ಶ್ರೀಮಠದ ಪರವಾಗಿ ಶಿವರಾಜ್ ಕುಮಾರ್ ದಂಪತಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಗಿದ್ದು, ಆಶೀರ್ವಚನ ಸಂದೇಶ ನೀಡಲಾಯಿತು. ಕುಟುಂಬ ಸದಸ್ಯರು ಹಾಗೂ ಭಕ್ತರು ಈ ವೇಳೆ ಉಪಸ್ಥಿತರಿದ್ದರು.