
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬೆನ್ನಲ್ಲೇ, ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ವಿಷಯ ಹರಡಿದ ಆರೋಪದ ಮೇಲೆ ‘beary_royal_nawab’ ಎಂಬ ಇನ್‌ಸ್ಟಾಗ್ರಾಂ ಪುಟವನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಪೇಜ್‌ಗೆ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಇದ್ದರು.
ಪೊಲೀಸರ ಪ್ರಕಾರ, ಈ ಪುಟ ಧಾರ್ಮಿಕ ಹಾಗೂ ಸಮುದಾಯ ಗುಂಪುಗಳ ನಡುವೆ ದ್ವೇಷ ವೈಷಮ್ಯವನ್ನು ಹೆಚ್ಚುವಂತೆ ಮಾಡುವ ವಿಷಯಗಳನ್ನು ನಿರಂತರವಾಗಿ ಪ್ರಕಟಿಸುತ್ತಿತ್ತು. ಇದುವರೆಗೆ ಈ ಪೇಜ್ ವಿರುದ್ಧ ಬರ್ಕೆ ಮತ್ತು ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆಗೆ ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಈ ವಿಷಯದಲ್ಲಿ ಸಂಬಂಧಪಟ್ಟ ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ಪತ್ರ ಚಲಾವಣೆಯಾಗಿ, ಅವರ ಸಹಕಾರದಿಂದ ಈ ಪುಟವನ್ನು ಭಾರತದಲ್ಲಿ ನಿಷ್ಕ್ರಿಯಗೊಳಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಉಪ ಆಯುಕ್ತರು ಸಿದ್ಧಾರ್ಥ್ ಗೋಯಲ್ ಹಾಗೂ ರವಿಶಂಕರ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.