
ಹಾಸನ: ಈ ಬಾರಿ ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ‘ರಾಷ್ಟ್ರ ರಕ್ಷಣಾ ಸೇನೆ’ ಎಂಬ ಸಂಘಟನೆಯ ಕಾರ್ಯಕರ್ತರು ಭಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ, ಉದ್ಘಾಟನೆ ಆಹ್ವಾನವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ಭೂಕರ್ ಪ್ರಶಸ್ತಿ ವಿಜೇತೆಯೂ ಆಗಿರುವ ಭಾನು ಮುಷ್ತಾಕ್ ಅವರನ್ನು ಈ ವರ್ಷದ ದಸರಾ ಉದ್ಘಾಟಕರಾಗಿ ಸರ್ಕಾರ ಆಯ್ಕೆ ಮಾಡಿದೆ. ಜಿಲ್ಲಾಡಳಿತವು ಅಧಿಕೃತವಾಗಿ ಅವರ ಮನೆಗೆ ತೆರಳಿ ಆಹ್ವಾನವನ್ನು ಸಹ ನೀಡಿದೆ. ಆದರೆ, ಈ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷದ ವತಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
ಈ ಚರ್ಚೆಗಳ ನಡುವೆಯೇ ಹಾಸನದಲ್ಲಿರುವ ಭಾನು ಮುಷ್ತಾಕ್ ಅವರ ಮನೆಗೆ ತೆರಳಿದ ರಾಷ್ಟ್ರ ರಕ್ಷಣಾ ಸೇನೆಯ ಕಾರ್ಯಕರ್ತರು, ನೀವು ಈ ಹಿಂದೆ ಭುವನೇಶ್ವರಿ ತಾಯಿಯ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದೀರಿ ಎಂದು ಆರೋಪಿಸಿದ್ದಾರೆ. ದಸರಾ ನಾಡಹಬ್ಬವಾಗಿದ್ದರೂ, ಅದು ಹಿಂದೂಗಳ ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿದೆ. ನಮ್ಮ ಸಂಸ್ಕೃತಿಯನ್ನು ಒಪ್ಪದ ನೀವು ದಸರಾ ಉದ್ಘಾಟನೆ ಕಾರ್ಯಕ್ರಮದಿಂದ ಹಿಂದೆ ಸರಿಯುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ. ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬಹುದು, ಆದರೆ ದಸರಾ ಉದ್ಘಾಟನೆಯಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಿಂದ ನೀವೇ ಸ್ವಯಂಪ್ರೇರಿತರಾಗಿ ದೂರ ಉಳಿಯಿರಿ ಎಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ದಸರಾ ಆಹ್ವಾನದ ಕುರಿತು ಮತ್ತಷ್ಟು ರಾಜಕೀಯ ಮತ್ತು ಸಾಮಾಜಿಕ ವಿವಾದ ಸೃಷ್ಟಿಯಾಗಿದೆ. ಸರ್ಕಾರದ ನಿರ್ಧಾರದ ನಂತರ ಭಾನು ಮುಷ್ತಾಕ್ ಅವರ ಪ್ರತಿಕ್ರಿಯೆ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.