
ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಶಾಸಕ ಎಚ್.ಡಿ. ರೇವಣ್ಣ, ಇದಕ್ಕೆ ಅತಿಯಾದ ಮದ್ಯಪಾನ ಮತ್ತು ಮಾಂಸಾಹಾರ ಸೇವನೆಯೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಕಳೆದ ಆರು ವಾರಗಳಲ್ಲಿ ಹಾಸನ ಜಿಲ್ಲೆಯಾದ್ಯಂತ 40ಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದು ಗಂಭೀರ ವಿಷಯ ಎಂದು ಅವರು ತಿಳಿಸಿದರು.
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, “ಹಾಸನ ಜಿಲ್ಲೆಯಲ್ಲಿ ಬೀಗರೂಟಗಳಲ್ಲಿ ಕೆಂಪು ಮಾಂಸದ (ರೆಡ್ ಮೀಟ್) ಅತಿಯಾದ ಸೇವನೆ ಹೆಚ್ಚಾಗಿದೆ. ಇದರ ಜೊತೆಗೆ, ಜಿಲ್ಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗಿದೆ. ಹೆಚ್ಚಿನ ಆದಾಯದ ಆಸೆಯಿಂದ ಹಲವರು ಬಾರ್‌ಗಳನ್ನು ತೆರೆದಿದ್ದು, ಅಲ್ಲಿನ ಮದ್ಯಪಾನವು ಅನಾಹುತಗಳಿಗೆ ಕಾರಣವಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸರಣಿ ಸಾವುಗಳನ್ನು ತಡೆಗಟ್ಟಲು ಒಂದು ಮಹತ್ವದ ಹೆಜ್ಜೆಯಾಗಿ, ರಾತ್ರಿ 8 ಗಂಟೆಯೊಳಗೆ ಎಲ್ಲಾ ಬಾರ್‌ಗಳನ್ನು ಮುಚ್ಚಬೇಕು ಎಂದು ರೇವಣ್ಣ ಆಗ್ರಹಿಸಿದರು. ಇದರಿಂದ ಮದ್ಯಪಾನ ಸೇವನೆಯನ್ನು ನಿಯಂತ್ರಿಸಬಹುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಬಹುದು ಎಂಬುದು ಅವರ ವಾದ. ಅವರ ಈ ಸಲಹೆಯು ಜಿಲ್ಲೆಯಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.