
ಬೈಲೂರು: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಬೈಲೂರು-ಕೌಡೂರು ನಾಯರ್‌ಬೆಟ್ಟು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಕೌಡೂರು-ಬೈಲೂರು ಶ್ರೀ ಕೋಟೆ ಆಂಜನೇಯ ಸನ್ನಿಧಿಯಲ್ಲಿ ಹನುಮ ಜಯಂತಿ ಪವಿತ್ರ ಧಾರ್ಮಿಕ ಪೂಜಾ ವಿಧಿಗಳೊಂದಿಗೆ ಇಂದು (ಏ.12) ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈ ವೇಳೆ ಕೌಡೂರು ನಾರಾಯಣ್ ಭಟ್ ಅವರ ನೇತೃತ್ವದಲ್ಲಿ ನವಕ ಪ್ರಧಾನ ಕಲಶಾರಾಧನೆ, ಪ್ರಧಾನ ಹೋಮ, ಪವಮಾನ ಪಾರಾಯಣ, ವಾಯುಸ್ತುತಿ, ಪಂಚಾಮೃತಾಭಿಷೇಕ, ಸೀಯಾಳ ಅಭಿಷೇಕ, ಮಹಾಪೂಜೆ, ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಪೂಜಾ ಕಾರ್ಯಕ್ರಮದ ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು. ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಹಲವು ಮುಖಂಡರು ಹಾಗೂ ನೂರಾರು ಭಕ್ತಾಧಿಗಳು ಈ ಧಾರ್ಮಿಕ ಶ್ರದ್ಧಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.