
ಮುಂಬಯಿ: ‘ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವರದಿಯೊಂದು ಸೆಲೆಬ್ರಿಟಿ ವಲಯದಲ್ಲಿ ಸುದ್ದಿಯಾಗಿದೆ. ಪತಿ ಸೊಹೇಲ್ ಖತುರಿಯಾ ಅವರಿಂದ ಹನ್ಸಿಕಾ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಸೊಹೇಲ್, ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿ ಅವರ ಮಾಜಿ ಪತಿಯಾಗಿದ್ದರು. ಗೆಳತಿಯ ಪತಿಯನ್ನು ಪ್ರೀತಿಸಿ ಹನ್ಸಿಕಾ ಮದುವೆಯಾದ ವಿಚಾರ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು ಮತ್ತು ಟೀಕೆಗಳನ್ನು ಎದುರಿಸಿತ್ತು. ಆದಾಗ್ಯೂ, ಹನ್ಸಿಕಾ ಡಿಸೆಂಬರ್ 4, 2022 ರಂದು ಜೈಪುರದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಸೊಹೇಲ್ ಖತುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಆದರೆ, ಮದುವೆಯಾದ ಕೇವಲ ಎರಡು ವರ್ಷಗಳ ಬಳಿಕ ಹನ್ಸಿಕಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಮದುವೆಯಾದ ಒಂದು ವರ್ಷದ ಬಳಿಕ ಹನ್ಸಿಕಾ ಪತಿಯೊಂದಿಗೆ ಫೋಟೋ ಹಂಚಿಕೊಂಡಿದ್ದರು. ಆದರೆ, ಎರಡನೇ ವಾರ್ಷಿಕೋತ್ಸವದ ದಿನದಂದು ಹನ್ಸಿಕಾ ಯಾವುದೇ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ, ಕಳೆದ ಕೆಲ ಸಮಯದಿಂದ ಅವರು ಗಂಡನೊಂದಿಗಿನ ಯಾವ ಫೋಟೋವನ್ನೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಇದಕ್ಕೆ ಪುರಾವೆ ಎನ್ನುವಂತೆ, ಹನ್ಸಿಕಾ ಮತ್ತು ಸೊಹೇಲ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೊಹೇಲ್, ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದು, “ಇದೆಲ್ಲ ಸುಳ್ಳು” ಎಂದಿದ್ದಾರೆ. ಆದರೆ, ವಿಚ್ಛೇದನ ಅಥವಾ ತಾವು ತಮ್ಮ ಹೆತ್ತವರ ಜೊತೆ ವಾಸಿಸುತ್ತಿರುವ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಇರುವುದು ಅನುಮಾನಕ್ಕೆ ಮತ್ತಷ್ಟು ಇಂಬು ನೀಡಿದೆ.
ಹನ್ಸಿಕಾ ತಮ್ಮ ಮದುವೆಯ ವಿಡಿಯೋವನ್ನು ಹಾಟ್‌ಸ್ಟಾರ್‌ಗೆ ದೊಡ್ಡ ಮೊತ್ತಕ್ಕೆ ಮಾರಿದ್ದರು. ಆದರೆ, ಈಗ ಮದುವೆ ಮುರಿದು ಬಿದ್ದ ವಿಚಾರಕ್ಕೆ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.