
ನವದೆಹಲಿ : ಭಾರತದ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗೆ ಸಂಬಂಧಿಸಿದ ಹೊಸ ಕಾನೂನಿನಡಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆಯಾದ ಇವರು ಮೊದಲಿಗರಾಗಿದ್ದಾರೆ.
ಜ್ಞಾನೇಶ್ ಕುಮಾರ್ ಅವರು 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ತಮ್ಮ ಅಧಿಕಾರಾವಧಿಯಲ್ಲಿ 2025 ರ ಕೊನೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಮತ್ತು 2026ರಲ್ಲಿ ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.
ಜ್ಞಾನೇಶ್ ಕುಮಾರ್ ಅವರು ಈ ಹಿಂದೆ ಗೃಹ ಸಚಿವಾಲಯದಲ್ಲಿ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸಾಂವಿಧಾನಿಕ ಸ್ಥಾನಮಾನವಾದ 370ನೇ ವಿಧಿ ರದ್ದಾದ ನಂತರದ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 2024ರ ಮಾರ್ಚ್ 15ರಂದು ಇವರು ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.
ನೇಮಕಾತಿ ಮುಂದೂಡಲು ಒತ್ತಾಯಿಸಿದ ಕಾಂಗ್ರೆಸ್
ಜ್ಞಾನೇಶ್ ಕುಮಾರ್ ಅವರ ನೇಮಕಾತಿಗೆ ಮುಂಚಿತವಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಸಂಯೋಜನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೂ ಹೊಸ ಮುಖ್ಯಸ್ಥರ ನೇಮಕಾತಿಯನ್ನು ಮುಂದೂಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿತ್ತು. ಆದರೆ, ಈ ಬೇಡಿಕೆಯನ್ನು ನಿರ್ಲಕ್ಷಿಸಿ ಸರ್ಕಾರವು ಜ್ಞಾನೇಶ್ ಕುಮಾರ್ ಅವರ ನೇಮಕಾತಿಯನ್ನು ಮುಂದುವರೆಸಿತು.
ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ರಾಹುಲ್ ಗಾಂಧಿ ಅವರು ಈ ನೇಮಕಾತಿಯನ್ನು ವಿರೋಧಿಸಿದ್ದರೂ, ಸರ್ಕಾರವು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
ಜ್ಞಾನೇಶ್ ಕುಮಾರ್ ಅವರ ನೇಮಕಾತಿಯು, ಭಾರತದ ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೊಂದಿಗೆ ಇವರ ನೇತೃತ್ವದಲ್ಲಿ ನಡೆಯಲಿರುವ ಚುನಾವಣೆಗಳು ದೇಶದ ರಾಜಕೀಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.