
ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಾನವೀಯತೆ ಮರೆತ ವಾಹನ ಸವಾರರು, ನಿವೃತ್ತ ಸೇನಾ ಯೋಧರೊಬ್ಬರನ್ನು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕೂರಿಸಿಕೊಂಡು ಕಿಲೋ ಮೀಟರ್‌ಗಳಷ್ಟು ದೂರ ಎಳೆದೊಯ್ದ ಭೀಕರ ಘಟನೆ ನಡೆದಿದೆ. ಕ್ಷುಲ್ಲಕ ರಸ್ತೆ ಅಪಘಾತದ ಜಗಳವು ಕೊನೆಗೆ ಪ್ರಾಣಾಪಾಯ ಉಂಟುಮಾಡುವ ಮಟ್ಟಕ್ಕೆ ತಲುಪಿದ್ದು, ಈ ಘಟನೆಯ ವಿಡಿಯೋ ಇದೀಗ ಇಡೀ ದೇಶದ ಗಮನ ಸೆಳೆದಿದೆ.
ಗ್ವಾಲಿಯರ್‌ನ ಮಹಾರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆದಿತ್ಯ ಪುರಂ ಎಂಬಲ್ಲಿ ಶನಿವಾರ ತಡರಾತ್ರಿ 11 ಗಂಟೆಯ ಸುಮಾರಿಗೆ ಈ ಅಮಾನವೀಯ ಕೃತ್ಯ ನಡೆದಿದೆ. ನಿವೃತ್ತ ಯೋಧ ಕಲ್ಯಾಣ್ ಕಿಶೋರ್ ಕಾಂತ್ ಶರ್ಮಾ ಅವರು ತಮ್ಮ ಸಂಬಂಧಿಕರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಮತ್ತೊಂದು ಕಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿತ್ತು. ಈ ಸಂಬಂಧ ಮಾತಿನ ಚಕಮಕಿ ಆರಂಭವಾದಾಗ ಎದುರಾಳಿ ಕಾರಿನಲ್ಲಿದ್ದ ಯುವಕರು ನಿವೃತ್ತ ಅಧಿಕಾರಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ಘರ್ಷಣೆ ತೀವ್ರಗೊಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ, ಅವರನ್ನು ತಡೆಯಲು ಶರ್ಮಾ ಅವರು ಕಾರಿನ ಮುಂದೆ ನಿಂತಿದ್ದಾರೆ. ಆದರೆ, ಕ್ರೂರವಾಗಿ ವರ್ತಿಸಿದ ಚಾಲಕ ಅಡ್ಡ ನಿಂತಿದ್ದ ಅಧಿಕಾರಿಯ ಮೇಲೆಯೇ ಕಾರು ಹತ್ತಿಸಲು ಮುಂದಾಗಿದ್ದಾನೆ. ಈ ವೇಳೆ ಬಾನೆಟ್ ಮೇಲೆ ಹಾರಿದ ಅಧಿಕಾರಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಯೋಧ ಕಾರಿನ ಮೇಲಿದ್ದರೂ ಕಿಂಚಿತ್ತೂ ಕರುಣೆ ತೋರದ ಕಿರಾತಕರು ಸುಮಾರು 1 ಕಿಲೋಮೀಟರ್ ದೂರದವರೆಗೆ ಅತಿ ವೇಗವಾಗಿ ಕಾರನ್ನು ಚಲಾಯಿಸಿದ್ದಾರೆ. ಕೊನೆಗೆ ಸಡನ್ ಬ್ರೇಕ್ ಹಾಕಿದ ಪರಿಣಾಮ ಶರ್ಮಾ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಪೊಲೀಸರು ಕಾರನ್ನು ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.



































