
ಮದುವೆಯ ಹೆಸರಿನಲ್ಲಿ ನೀಡಲಾದ ಭರ್ಜರಿ ಉಡುಗೊರೆಗಳಾದ ಕಾರು, ಬೈಕ್, ಚಿನ್ನಾಭರಣ, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶನಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳು, ಡಜನ್ ಗಟ್ಟಲೆ ಎಸಿ, ಟಿವಿ, ಫ್ರಿಜ್, ನೂರಾರು ಸೀರೆಗಳು, ಸಾವಿರಾರು ಪಾತ್ರೆಗಳು ಹಾಗೂ ದುಬಾರಿ ಪೀಠೋಪಕರಣಗಳ ಭಾರೀ ಶೋ ಕಂಡು ನೇಟಿಗರು ಬೆರಗಾಗಿದ್ದಾರೆ. ವರನಿಗಷ್ಟೇ ಅಲ್ಲದೆ, ಮಾವ, ಅತ್ತಿಗೆ, ಭಾವ ಮಿತ್ರರಿಗೂ ಬೈಕ್ ಉಡುಗೊರೆ ನೀಡಲಾಗಿದೆ!
ಈ ‘ವೈಭವದ’ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು “ಇದು ಕುಟುಂಬದ ಔದಾರ್ಯ” ಎಂದು ಹೊಗಳಿದರೆ, ಅನೇಕರು “ಇದು ವರದಕ್ಷಿಣೆ ಸಂಸ್ಕೃತಿಯ ಪ್ರಚಾರ, ಕಾನೂನು ಉಲ್ಲಂಘನೆ” ಎಂದು ಕಿಡಿಕಾರಿದ್ದಾರೆ. “ಇದು ಪ್ರೀತಿಯ ಅಭಿವ್ಯಕ್ತಿ ಅಲ್ಲ, ಶ್ರೀಮಂತಿಕೆಯ ಶೋ” ಎಂಬ ಟೀಕೆಗಳೂ ಹರಿದು ಬಂದಿದೆ.
ಇಂತಹ ಘಟನೆಗಳು ವರದಕ್ಷಿಣೆ ನಿಷೇಧ ಕಾಯ್ದೆಯ ಜಾರಿಗೆ ಪ್ರಶ್ನಾರ್ಥಕ ಚಿಹ್ನೆ ಎಳೆದಿವೆ. ಈ ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ.