
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಇನ್ನೊಂದು ವಾರದಲ್ಲಿ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, “ಇದುವರೆಗೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಇದೀಗ ವಿಕೇಂದ್ರೀಕರಣದ ಭಾಗವಾಗಿ ತಾಲೂಕು ಪಂಚಾಯಿತಿಗಳ ಮೂಲಕ ಫಲಾನುಭವಿಗಳ ಖಾತೆಗೆ ಶೀಘ್ರದಲ್ಲೇ ಹಣ ಜಮಾ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ರಸ್ತೆ ಅಪಘಾತದಿಂದ ವಿಶ್ರಾಂತಿಯಲ್ಲಿದ್ದ ಕಾರಣ ಹಣ ಬಿಡುಗಡೆ ಸ್ವಲ್ಪ ವಿಳಂಬವಾಯಿತು. ಆದರೆ ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ತೊಂದರೆ ಇರುವುದಿಲ್ಲ ಎಂದಿದ್ದಾರೆ.
ಇದರ ಜೊತೆಗೆ, ವಿರೋಧ ಪಕ್ಷದವರ ವಿರುದ್ಧ ತಿರುಗೇಟು ನೀಡಿದ ಅವರು, “ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಬೇರೆ ರಾಜ್ಯಗಳಲ್ಲಿ ಅನುಸರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ನಮ್ಮ ಯೋಜನೆಗಳ ವಿರುದ್ಧ ಕೇವಲ ಮಾತನಾಡಲು ಮಾತ್ರ ಅವರಿಗೆ ತಿಳಿದಿದೆ” ಎಂದು ವ್ಯಂಗ್ಯವಾಡಿದರು.