
ಆಂಧ್ರಪ್ರದೇಶ : ಮದ್ಯಪ್ರಿಯರಿಗೆ ಸಿಹಿ ಸುದ್ದಿ! ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆಗಳನ್ನು ಭರ್ಜರಿಯಾಗಿ ಕಡಿತಗೊಳಿಸಲಾಗಿದೆ. ಪ್ರತಿ ಬಾಟಲಿಯ ಮೇಲೆ ₹10 ರಿಂದ ₹100 ವರೆಗೆ ಬೆಲೆ ಇಳಿಕೆ ಮಾಡಲಾಗಿದ್ದು, ಇದರಿಂದ ಗ್ರಾಹಕರಿಗೆ ಮಾಸಿಕ ₹116 ಕೋಟಿಗಳಷ್ಟು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ, ಮದ್ಯ ನೀತಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ಕೈಗೆಟುಕುವ ದರದಲ್ಲಿ ಮದ್ಯ ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ, ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವರದಿಗಳ ಪ್ರಕಾರ, ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಮದ್ಯದ ಬ್ರಾಂಡ್‌ಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅಕ್ರಮ ಅಥವಾ ಹಾನಿಕಾರಕ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚಿಸಲಾಗಿದೆ. ಹೊಸ ಮದ್ಯ ನೀತಿಯು ರಾಜ್ಯದ ಆದಾಯವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕುಸಿದಿದ್ದ ಮದ್ಯ ಮಾರಾಟ ಈಗ ಮತ್ತೆ ಚೇತರಿಸಿಕೊಂಡಿದ್ದು, ನಕಲಿ ಬ್ರಾಂಡ್‌ಗಳಿಗೆ ಕಡಿವಾಣ ಬಿದ್ದಿರುವುದರಿಂದ ಬಡ ವರ್ಗಗಳಲ್ಲಿನ ವ್ಯಸನವನ್ನು ನಿಗ್ರಹಿಸಲು ಸಹಾಯವಾಗಿದೆ ಎಂದಿದ್ದಾರೆ.
ಈ ಬೆಲೆ ಕಡಿತದಿಂದಾಗಿ, ಆಂಧ್ರಪ್ರದೇಶದಲ್ಲಿ ಸುಮಾರು 30 ಬ್ರಾಂಡ್‌ಗಳ ಮದ್ಯದ ಬೆಲೆಗಳು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿಗಿಂತ ಕಡಿಮೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮದ್ಯಪ್ರಿಯರಿಗೆ ನಿಜಕ್ಕೂ ಭರ್ಜರಿ ಗುಡ್ ನ್ಯೂಸ್ ಆಗಿದೆ.