
ಉಡುಪಿ: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಿಂಸಾತ್ಮಕ ಘಟನೆಗಳು ಹಾಗೂ ಹಿಂದೂ ಸಂಘಟನೆಗಳ ಮೇಲಿನ ದಾಳಿಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾಜಿ ಸಂಸದ ಮತ್ತು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸರ್ಕಾರದ ವಿರುದ್ಧ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಸರ್ಕಾರ ಮೊದಲು ತನ್ನ ಕರ್ತವ್ಯ ಮಾಡಲಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಹಿಂದೂ ಮುಖಂಡರ ಮೇಲಿನ ದಾಳಿ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರಿನಲ್ಲಿ ಬೆಳೆದುಬಂದಿರುವ ಪರಿಸ್ಥಿತಿ ಕಾಶ್ಮೀರವನ್ನು ಹೋಲುತ್ತಿದೆ. ” ಎಂದು ಹೇಳಿದ್ದಾರೆ.
“ಈ ದೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವವರನ್ನು ಸರಿಯಾಗಿ ಶಿಕ್ಷಿಸಲಾಗುತ್ತಿಲ್ಲ. ಆದರೆ ಜನಿವಾರ ಹಾಕಿದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಎಲ್ಲರಿಗೂ ಇದೆ,” ಎಂದರು.
ರಾಜ್ಯ ಸರ್ಕಾರದ ಕಾರ್ಯಪದ್ಧತಿಯನ್ನು ತರಾಟೆಗೆ ತೆಗೆದುಕೊಂಡ ನಳಿನ್, “ಸರ್ಕಾರ ತನ್ನ ಕರ್ತವ್ಯ ಬದ್ಧತೆಯಿಂದ ನಿಭಾಯಿಸಬೇಕು. ತಪ್ಪುಗಳನ್ನು ಇತರರ ಮೇಲೆ ಹೋರಿಸದೇ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ತಾವು ಹೊಣೆಯುಳ್ಳವರಾಗಿ ನಡೆದುಕೊಳ್ಳಬೇಕು,” ಎಂದು ಟೀಕಿಸಿದರು.
ಅವರು ಮುಂದುವರಿದು, “ಕರ್ನಾಟಕದ ನೈತಿಕತೆ ಹಾಗೂ ಶಾಸನಸಮ್ಮತ ಆಡಳಿತ ವ್ಯವಸ್ಥೆಗೆ ಈಗ ಬಹಳ ಅವಹೇಳನೆಯಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಜನರು ತಾವೇ ಉತ್ತರ ನೀಡುವ ಪರಿಸ್ಥಿತಿ ಬರುವುದು ಖಚಿತ,” ಎಂದು ಎಚ್ಚರಿಕೆ ನೀಡಿದರು.