
ಹೊಸದಿಲ್ಲಿ: ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ, ಭಾರತದಲ್ಲಿ ಕಂಪನಿಯ ಇದುವರೆಗಿನ ಅತಿದೊಡ್ಡ ಹೂಡಿಕೆಯಾದ $15 ಬಿಲಿಯನ್ ಮೊತ್ತದ ಬೃಹತ್ ಯೋಜನೆಗಳ ಬಗ್ಗೆ ಪಿಚೈ ಮಾಹಿತಿ ನೀಡಿದರು.
ವಿಶಾಖಪಟ್ಟಣಂನಲ್ಲಿ ತನ್ನ ಕೃತಕ ಬುದ್ಧಿಮತ್ತೆ ಕೇಂದ್ರಕ್ಕಾಗಿ ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪನಿಯ ಯೋಜನೆಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಂಡಿರುವುದಾಗಿ ಪಿಚೈ ತಿಳಿಸಿದರು.
ಅಮೆರಿಕ ಹೊರಗಿನ ಅತಿದೊಡ್ಡ AI ಕೇಂದ್ರ
ಗೂಗಲ್ ಕಂಪನಿಯು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ತನ್ನ ಮೊದಲ AI ಹಬ್ ಸ್ಥಾಪಿಸಲು ಮುಂದಾಗಿದ್ದು, ಇದು ಅಮೆರಿಕದ ಹೊರಗಿನ ಕಂಪನಿಯ ಅತಿದೊಡ್ಡ AI ಕೇಂದ್ರ ಆಗಲಿದೆ. ಇದಕ್ಕಾಗಿ ಗೂಗಲ್, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ $15 ಬಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಈ ಮಹತ್ವಾಕಾಂಕ್ಷೆಯ AI ಹಬ್‌ಗೆ ಗೂಗಲ್, ಅದಾನಿ ಗ್ರೂಪ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದನ್ನು “ಹೆಗ್ಗುರುತು” ಬೆಳವಣಿಗೆ ಎಂದು ಕರೆದ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ, ಈ ಕೇಂದ್ರವು ಗಿಗಾವ್ಯಾಟ್-ಪ್ರಮಾಣದ ಕಂಪ್ಯೂಟ್ ಸಾಮರ್ಥ್ಯ, ಹೊಸ ಅಂತಾರಾಷ್ಟ್ರೀಯ ಸಬ್‌ಸೀ ಗೇಟ್‌ವೇ ಮತ್ತು ದೊಡ್ಡ ಪ್ರಮಾಣದ ಇಂಧನ ಮೂಲಸೌಕರ್ಯವನ್ನು ಸಂಯೋಜಿಸುತ್ತದೆ ಎಂದು ತಿಳಿಸಿದರು.
“ಕ್ರಿಯಾತ್ಮಕ ನಗರವಾದ ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಆರಂಭವಾಗುತ್ತಿರುವುದರಿಂದ ಸಂತೋಷಗೊಂಡಿದ್ದೇನೆ. ಈ ಹೂಡಿಕೆ ಭಾರತದ ‘ವಿಕಸಿತ ಭಾರತ’ದ ದೂರದೃಷ್ಟಿಗೆ ಅನುಗುಣವಾಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.