
ನೆಲಮಂಗಲ : ಪ್ಲಾಸ್ಟಿಕ್ ಗನ್ ಹಿಡಿದು ಬೆಂಗಳೂರಿನ ಹೊರವಲಯದಲ್ಲಿ ಚಿನ್ನಾಭರಣ ದೋಚಿದ್ದ ಮೂವರು ಖತರ್ನಾಕ್ ದರೋಡೆಕೋರರನ್ನು ಬಂಧಿಸುವಲ್ಲಿ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಗ್ಯಾಂಗ್ 50ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬಯಲಾಗಿದೆ.
ಬಂಧಿತರನ್ನು ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್ ಮತ್ತು ರಂಶಾದ್ ಎಂದು ಗುರುತಿಸಲಾಗಿದೆ. ಈ ಮೂವರು ಉಡುಪಿ, ಒಡಿಶಾ ಮತ್ತು ಮಂಗಳೂರು ಮೂಲದವರಾಗಿದ್ದು, ರಾಜ್ಯದಾದ್ಯಂತ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದರು.
ಪ್ರಕರಣದ ವಿವರ: ಕಳೆದ ಜೂನ್ 25 ರಂದು ಮಾದನಾಯಕನಹಳ್ಳಿಯ ಮಾಚೋಹಳ್ಳಿ ಗೇಟ್ ಸಮೀಪದ ಜ್ಯುವೆಲರಿ ಶಾಪ್ ಒಂದಕ್ಕೆ ಈ ಗ್ಯಾಂಗ್ ನುಗ್ಗಿತ್ತು. ಪ್ಲಾಸ್ಟಿಕ್ ಗನ್ ತೋರಿಸಿ ಅಂಗಡಿ ಮಾಲೀಕರಿಗೆ ಬೆದರಿಸಿ, ಸುಮಾರು 90 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ದರೋಡೆಯಾದ ಚಿನ್ನದ ಮೌಲ್ಯ ಸುಮಾರು 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿ ದರೋಡೆಕೋರರ ಜಾಡು ಹಿಡಿದು ಬಂಧಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ 90 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಈ ಗ್ಯಾಂಗ್ ಮಾಡಿರುವ ಅಪರಾಧಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.