
ಬ್ರಹ್ಮಾವರ ತಾಲೂಕಿನ ಯಡ್ತಾಡಿಯಲ್ಲಿ ರಸ್ತೆ ಮೂಲಕ ತೆರಳುತ್ತಿದ್ದ ಮಹಿಳೆಯ ಕರಿಮಣಿ ಸರ ಕಸಿದು ಪರಾರಿಯಾದ ಆರೋಪಿಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.
ಘಟನೆ ವಿವರ:
ಮಾರ್ಚ್ 21 ರಂದು ಯಡ್ತಾಡಿ ನಿವಾಸಿ ಸೀತಾ ಬಾಯಿ ಪಕ್ಕದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿ 28 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಸ್ಥಳೀಯರು ತಕ್ಷಣ ದೂರು ನೀಡಿದ ಕಾರಣ, ಪೊಲೀಸರು ಸಿ.ಸಿ. ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಮಂಜುನಾಥ ಮಯ್ಯನನ್ನು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿ ಮಂಜುನಾಥ ಈ ಹಿಂದೆ ಬಾರ್ಕೂರು ಚೌಳಿಕೆರೆಯಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕದ್ದ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಕಳವಿನ ಚಿನ್ನವನ್ನು ಸಹಕಾರಿ ಸಂಘವೊಂದರಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದಾನೆ. ಈತ ಪರೋಟ ವ್ಯಾಪಾರ ನಡೆಸುತ್ತಿದ್ದ ಮತ್ತು ಭಾರೀ ಸಾಲದಲ್ಲಿ ಮುಳುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.