
ಉಡುಪಿ: ಹಿರಿಯಡ್ಕದ ನಾಗರಿಕರೊಬ್ಬರು ಅಪಾರ ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಅತ್ಯುತ್ತಮ ಪ್ರಾಮಾಣಿಕತೆ ಮೆರೆದಿದ್ದಾರೆ.
ಸೆಪ್ಟೆಂಬರ್ 29, 2025ರಂದು ಕೊಪ್ಪ ಮೂಲದ ಸಂದೇಶ್ ಎಂಬುವವರು ತಮ್ಮ ಕುಟುಂಬದೊಂದಿಗೆ ಹಿರಿಯಡ್ಕದ ವೀರಭದ್ರ ದೇವಸ್ಥಾನಕ್ಕೆ ಬಂದಿದ್ದಾಗ, ಅವರ ಕುಟುಂಬ ಸದಸ್ಯರ 24 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿತ್ತು. ಈ ಕುರಿತು ಅವರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕಳೆದುಹೋದ ಸ್ಥಳದ ಸುತ್ತಮುತ್ತ ಮತ್ತು ಸ್ಥಳೀಯರಲ್ಲಿ ವಿಚಾರಣೆ ನಡೆಸಿ, ಚಿನ್ನದ ಸರ ಸಿಕ್ಕಿದಲ್ಲಿ ಠಾಣೆಗೆ ಅಥವಾ ವಾರಸುದಾರರಿಗೆ ಹಿಂದಿರುಗಿಸುವಂತೆ ಮನವಿ ಮಾಡಿದ್ದರು.
ಪೊಲೀಸರ ಮನವಿಗೆ ಸ್ಪಂದಿಸಿದ ಹಿರಿಯಡ್ಕ ಮೂಲದ ಪ್ರಶಾಂತ್ ಎಂಬುವವರಿಗೆ ಈ ಸರ ಸಿಕ್ಕಿದ್ದು, ಅವರು ಸೆಪ್ಟೆಂಬರ್ 30, 2025ರಂದು ಅದನ್ನು ನೇರವಾಗಿ ಠಾಣೆಗೆ ತಂದು ಒಪ್ಪಿಸಿದ್ದಾರೆ.

ಪ್ರಾಮಾಣಿಕ ನಾಗರಿಕನಿಗೆ ಸನ್ಮಾನ
ಪ್ರಶಾಂತ್ ಅವರ ಈ ನಿಸ್ವಾರ್ಥ ಮತ್ತು ಉತ್ತಮ ಕಾರ್ಯವನ್ನು ಅಭಿನಂದಿಸಿದ ಹಿರಿಯಡ್ಕ ಠಾಣೆಯ ಪಿಎಸ್‌ಐ ಪುನೀತ್ ಸರ್ ಮತ್ತು ತನಿಖಾ ಪಿಎಸ್‌ಐ ವಿಠಲ್ ಸರ್ ಅವರು, ಪ್ರಶಾಂತ್‌ಗೆ ಸನ್ಮಾನಿಸಿ ಗೌರವಿಸಿದರು. ನಂತರ ಕಳೆದುಹೋಗಿದ್ದ ಚಿನ್ನದ ಸರವನ್ನು ಅದರ ವಾರಸುದಾರರಾದ ಸಂದೇಶ್ ಕುಟುಂಬಕ್ಕೆ ಹಿಂದಿರುಗಿಸಲಾಯಿತು.