
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಮಂಗಳವಾರ ಬೆಂಗಳೂರಿನ ಕೋರ್ಟ್‌ನಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಜೈಲು ಶಿಕ್ಷೆ ಅನುಭವಿಸಲಾಗದೆ ಕಣ್ಣೀರಿಟ್ಟ ದರ್ಶನ್, “ನನಗೆ ಸ್ವಲ್ಪ ವಿಷ ಕೊಡಿ” ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಮನವಿಯಲ್ಲಿ ಏನಿದೆ?
ಬೆಂಗಳೂರಿನ 57ನೇ ಸಿ.ಸಿ.ಹೆಚ್. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ದರ್ಶನ್ ನ್ಯಾಯಾಧೀಶರ ಮುಂದೆ ನಿಂತು, “ನಾನು ಸೂರ್ಯನ ಬೆಳಕನ್ನು ನೋಡಿ ಬಹಳ ದಿನಗಳಾಗಿದೆ. ಕೈಗೆಲ್ಲಾ ಫಂಗಸ್ ಬಂದಿದೆ. ಜೈಲಿನ ಶಿಕ್ಷೆಯನ್ನು ಅನುಭವಿಸಲು ಆಗುತ್ತಿಲ್ಲ. ಬೇರೆ ಯಾರಿಗೂ ಬೇಡ, ನನಗೆ ಸ್ವಲ್ಪ ವಿಷ ಕೊಡಿ” ಎಂದು ಕಣ್ಣೀರಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಅದೆಲ್ಲಾ ಕೇಳುವಂತಿಲ್ಲ, ನಿಮ್ಮ ಮನವಿಯ ಬಗ್ಗೆ ಸೂಕ್ತ ಆದೇಶ ನೀಡುತ್ತೇವೆ” ಎಂದು ಹೇಳಿ ಮಧ್ಯಾಹ್ನ 3 ಗಂಟೆಗೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಜೈಲು ವರ್ಗಾವಣೆ ಹಾಗೂ ಸೌಲಭ್ಯಗಳಿಗೆ ಅರ್ಜಿ
ದರ್ಶನ್ ಅವರ ಈ ಮನವಿಯ ಜೊತೆಗೆ, ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ದರ್ಶನ್ ಪರ ವಕೀಲರು ಜೈಲಿನಲ್ಲಿ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ಮತ್ತು ಬಟ್ಟೆಗಳನ್ನು ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ನ್ಯಾಯಾಲಯ ಈ ಎರಡೂ ಅರ್ಜಿಗಳ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.