
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 17 ವರ್ಷದ ಬಾಲಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದಾಗ, ಅಲ್ಲಿಯೇ ಮತ್ತೊಂದು ದೌರ್ಜನ್ಯಕ್ಕೆ ಒಳಗಾದ ದಾರುಣ ಘಟನೆ ನಡೆದಿದೆ. ಪ್ರೀತಿಸುವ ನೆಪದಲ್ಲಿ ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ಧ ದೂರು ನೀಡಲು ಹೋದ ಬಾಲಕಿಗೆ, ಕಾನ್ಸ್‌ಸ್ಟೇಬಲ್ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ ಎಸಗಿರುವ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮೈಕೋ ಲೇಔಟ್ ನಿವಾಸಿ 17 ವರ್ಷದ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಆದರೆ, ಆತನಿಗೆ ಈಗಾಗಲೇ ಮದುವೆಯಾಗಿರುವ ಸತ್ಯ ತಡವಾಗಿ ಗೊತ್ತಾದಾಗ, ಬಾಲಕಿ ಮೋಸ ಹೋಗಿದ್ದೇನೆ ಎಂದು ಪೊಲೀಸರನ್ನು ಸಂಪರ್ಕಿಸಿದ್ದಳು.
ಆದರೆ, ಬೊಮ್ಮನಹಳ್ಳಿ ಠಾಣೆಯ ಕಾನ್ಸ್‌ಸ್ಟೇಬಲ್ ತಾನು ನ್ಯಾಯ ಕೊಡಿಸುವೆ ಎಂದು ನಂಬಿಸಿ, ಕೆಲಸ ಕೊಡಿಸುವ ಭರವಸೆ ನೀಡಿದ್ದನು. ಬಳಿಕ ವಿಚಾರಣೆಗೋಸ್ಕರ ಕರೆದುಕೊಂಡು ಹೋಗುವುದಾಗಿ ಹೇಳಿ ಓಯೋ ಲಾಡ್ಜ್‌ಗೆ ಕರೆದೊಯ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಅಪ್ರಾಪ್ತೆಯೊಬ್ಬಳಿಗೆ ನ್ಯಾಯ ಒದಗಿಸಬೇಕಾದ ಪೊಲೀಸ್ ಅಧಿಕಾರಿ, ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕಾನ್ಸ್‌ಸ್ಟೇಬಲ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.