
ಗಾಜಿಯಾಬಾದ್: ಆನ್‌ಲೈನ್ ಗೇಮಿಂಗ್ ಎಂಬ ಮಾಯಾಲೋಕ ಅಪ್ರಾಪ್ತ ವಯಸ್ಕರ ಮೇಲೆ ಎಂತಹ ಗಂಭೀರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಭಾರತ್ ಸಿಟಿ ವಸತಿ ಸಮುಚ್ಚಯದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೊಬೈಲ್ ಗೇಮ್‌ಗಳ ಅತಿಯಾದ ಚಟಕ್ಕೆ ಬಿದ್ದಿದ್ದ 16, 14 ಮತ್ತು 12 ವರ್ಷದ ಮೂವರು ಸಹೋದರಿಯರು, ಬುಧವಾರ ಮುಂಜಾನೆ ಸುಮಾರು 2:15 ರ ಸುಮಾರಿಗೆ ತಮ್ಮ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಜಿಗಿದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊರಿಯಾ ದೇಶದ ಭ್ರಮಲೋಕದಲ್ಲಿ ಮಕ್ಕಳು
ಮೃತ ಬಾಲಕಿಯರನ್ನು ವಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ, ಈ ಸಹೋದರಿಯರು ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ (Korean Love Game) ಎಂಬ ಆನ್‌ಲೈನ್ ಅಪ್ಲಿಕೇಶನ್‌ಗೆ ತೀವ್ರವಾಗಿ ದಾಸರಾಗಿದ್ದರು. ಕೇವಲ ಆಟ ಆಡುವುದಷ್ಟೇ ಅಲ್ಲದೆ, ಅವರು ತಮ್ಮನ್ನು ತಾವು ‘ಕೊರಿಯನ್ ರಾಜಕುಮಾರಿಯರು’ ಎಂದು ಭಾವಿಸುವಷ್ಟು ಆ ಸಂಸ್ಕೃತಿಗೆ ಮರುಳಾಗಿದ್ದರು. ಮನೆಯಲ್ಲಿಯೂ ಸಹ ಒಬ್ಬರಿಗೊಬ್ಬರು ಕೊರಿಯನ್ ಹೆಸರುಗಳಿಂದಲೇ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಮನೆಯಲ್ಲಿ ಉಂಟಾದ ಬಿರುಕು
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕಲಿಕೆಗಾಗಿ ನೀಡಲಾಗಿದ್ದ ಮೊಬೈಲ್ ಫೋನ್‌ಗಳು ಅವರ ಜೀವನವನ್ನೇ ಬದಲಿಸಿದ್ದವು. ಕಳೆದ 2 ವರ್ಷಗಳಿಂದ ಅವರು ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಹಿರಿಯ ಮಗಳು ವಿಶಿಕಾ ಕೇವಲ 4ನೇ ತರಗತಿವರೆಗೆ ಓದಿದ್ದು, ಬಳಿಕ ಶಿಕ್ಷಣದಿಂದ ದೂರ ಉಳಿದಿದ್ದಳು. ಮಕ್ಕಳು ಸದಾ ಮೊಬೈಲ್‌ನಲ್ಲಿ ಮುಳುಗಿರುವುದನ್ನು ಕಂಡ ತಂದೆ ಚೇತನ್ ಕುಮಾರ್, ಇತ್ತೀಚೆಗೆ ಫೋನ್ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರು. ಈ ವಿಷಯವಾಗಿ ಮನೆಯಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ.
8 ಪುಟಗಳ ನೋವಿನ ಪತ್ರ: ‘ಕ್ಷಮಿಸಿ ಅಪ್ಪಾ’
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಬಾಲಕಿಯರು ಬರೆದಿರುವ 8 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಆ ಪತ್ರದಲ್ಲಿ ಬಾಲಕಿಯರು ತಮ್ಮ ತಂದೆಯ ಬಳಿ ಕ್ಷಮೆಯಾಚಿಸುತ್ತಾ, “ಕ್ಷಮಿಸಿ ಅಪ್ಪಾ… ನಮಗೆ ಕೊರಿಯಾವನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಕೊರಿಯಾವೇ ನಮ್ಮ ಜೀವನ, ಅದನ್ನು ನಮ್ಮಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಬರೆದಿದ್ದಾರೆ. ಅಲ್ಲದೆ, ಡೈರಿಯ ಕೊನೆಯಲ್ಲಿ ಅಳುವ ಎಮೋಜಿಯನ್ನು ಬಿಡಿಸುವ ಮೂಲಕ ತಮ್ಮ ಮಾನಸಿಕ ತೊಳಲಾಟವನ್ನು ವ್ಯಕ್ತಪಡಿಸಿದ್ದಾರೆ.
ದುರಂತದ ಕ್ಷಣಗಳು
ಬುಧವಾರ ಮಧ್ಯರಾತ್ರಿ ಮನೆಯವರೆಲ್ಲಾ ಮಲಗಿದ್ದಾಗ, ಮೂವರು ಸಹೋದರಿಯರು ದೇವರ ಕೋಣೆಯ ಕಿಟಕಿಯ ಬಳಿ ತೆರಳಿ, ಒಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಅಲ್ಲಿನ ಕಿಟಕಿಯ ಮೂಲಕ ಒಬ್ಬೊಬ್ಬರಾಗಿಯೇ ಕೆಳಕ್ಕೆ ಜಿಗಿದಿದ್ದಾರೆ. ಜೋರಾದ ಶಬ್ದ ಕೇಳಿ ಧಾವಿಸಿದ ನೆರೆಹೊರೆಯವರು ಹಾಗೂ ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಪ್ರಸ್ತುತ ಗಾಜಿಯಾಬಾದ್ ಪೊಲೀಸರು ಬಾಲಕಿಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಆಟದಲ್ಲಿ ನೀಡಲಾದ ‘ಟಾಸ್ಕ್’ಗಳು ಮಕ್ಕಳನ್ನು ಈ ಹಂತಕ್ಕೆ ತಳ್ಳಿವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



































