
ಉತ್ತರ ಪ್ರದೇಶ, ಗಾಜಿಯಾಬಾದ್: ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.
ವಿಕಾಸ್ ಎಂಬ ಆರೋಪಿ, ತನ್ನ ಪತ್ನಿ ರೂಬಿ ಅವರೊಂದಿಗೆ ಪಾಸ್‌ಪೋರ್ಟ್ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ಜಗಳ ತಾರಕಕ್ಕೇರಿದಾಗ, ಆರೋಪಿ ವಿಕಾಸ್ ಕೋಪಗೊಂಡು ತನ್ನ 11 ವರ್ಷದ ಮಗಳ ಎದುರೇ ಪತ್ನಿ ರೂಬಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಘಟನೆಯ ನಂತರ ಆರೋಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬಳು ಮನೆಯಲ್ಲಿ ಘಟನೆಗೆ ಸಾಕ್ಷಿಯಾಗಿದ್ದಾಳೆ, ಇನ್ನೊಬ್ಬಳು ಶಾಲೆಗೆ ಹೋಗಿದ್ದಳು. ದಂಪತಿಗಳು ಒಂದು ವರ್ಷದ ಹಿಂದೆ ಗಾಜಿಯಾಬಾದ್‌ಗೆ ಬಂದು ವಾಸಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮನೆಯಲ್ಲಿ ಆಗಾಗ್ಗೆ ಜಗಳವಾಡುತ್ತಿದ್ದ ವಿಕಾಸ್, ತಿಂಗಳುಗಟ್ಟಲೆ ಮನೆಯಿಂದ ದೂರ ಇರುತ್ತಿದ್ದನೆಂದು ತಿಳಿದುಬಂದಿದೆ. ವಿಕಾಸ್ ನಿರುದ್ಯೋಗಿಯಾಗಿದ್ದು, ಇದು ಕೂಡ ಜಗಳಕ್ಕೆ ಕಾರಣವಾಗಿತ್ತು.
ದಂಪತಿಗಳ ಅಪರಾಧ ಹಿನ್ನೆಲೆ
ಘಟನೆಯ ನಂತರ ಪೊಲೀಸರು ರೂಬಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವಳು ಮೃತಪಟ್ಟಿದ್ದಳು. ಈ ದಂಪತಿಗಳು ಇಬ್ಬರೂ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೂಬಿಯ ಸಹೋದರ 2019 ರಲ್ಲಿ ಕೊಲೆಯಾಗಿದ್ದನು. ರೂಬಿಯ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇದ್ದು, 2020 ರಲ್ಲಿ ಮೋದಿನಗರ ಪೊಲೀಸ್ ಠಾಣೆಯಲ್ಲಿ ಆಕೆಯನ್ನು ಗ್ಯಾಂಗ್‌ಸ್ಟರ್ ಎಂದು ದಾಖಲಿಸಲಾಗಿದೆ. ಮೀರತ್ ಮೂಲದ ವಿಕಾಸ್ ಕೂಡ ಈ ಹಿಂದೆ ಮೋದಿನಗರದಲ್ಲಿ ವಾಸವಾಗಿದ್ದು, ಆತನು ಅಲ್ಲಿ ಗ್ಯಾಂಗ್‌ಸ್ಟರ್ ಆಗಿದ್ದನು.
ಪೊಲೀಸರು ರೂಬಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪರಾರಿಯಾಗಿರುವ ವಿಕಾಸ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.