
ಗಂಗಾವತಿ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ. ವೆಂಕಟೇಶ್ ಜಂತಗಲ್ (32) ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ರಾಣಾ ಪ್ರತಾಪ್ ಸಿಂಗ್ ಸರ್ಕಲ್ ಹತ್ತಿರ ಇರುವ ರಿಲಯನ್ಸ್ ಮಾರ್ಟ್ ಬಳಿ ಮಂಗಳವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ.
ಕೊಲೆ ಕೃತ್ಯದ ವಿವರ
ವೆಂಕಟೇಶ್ ಅವರು ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಅಪರಿಚಿತ ಯುವಕರ ತಂಡವೊಂದು ಅಡ್ಡಗಟ್ಟಿ ದಾಳಿ ನಡೆಸಿದೆ. ದುಷ್ಕರ್ಮಿಗಳು ಮಚ್ಚು ಮತ್ತು ಲಾಂಗುಗಳಿಂದ ಅವರನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ವೆಂಕಟೇಶ್ ಜೊತೆಗಿದ್ದ ಸ್ನೇಹಿತರು ಆಂಬ್ಯುಲೆನ್ಸ್ ಮೂಲಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು.
ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರನ್ನು ದುಷ್ಕರ್ಮಿಗಳು ನಗರದ ಆನೆಗೊಂದಿ ರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ಎದುರಿನ ವಿಜಯನಗರ ಕಾಲೋನಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ಹಿನ್ನೆಲೆ ಮತ್ತು ತನಿಖೆ
ಕೊಲೆಯಾದ ಕೆ. ವೆಂಕಟೇಶ್ ಅವರು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಆಪ್ತರಾಗಿದ್ದರು ಮತ್ತು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರು ಸ್ಥಳೀಯ ಜೆಎನ್ ಎನ್ ಕೇಬಲ್ ಚಾನೆಲ್‌ಗೆ ವರದಿಗಾರರಾಗಿಯೂ ಕೆಲಸ ಮಾಡುತ್ತಿದ್ದರು.
ಗಂಗಾವತಿ ನಗರದಲ್ಲಿ ನಡೆದಿದ್ದ ಕೋಮುಸಂಘರ್ಷದ ಸಂದರ್ಭದಲ್ಲಿ ವೆಂಕಟೇಶ್ ಅವರ ಮೇಲೆಯೂ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆಗೆ ಹಳೆಯ ದ್ವೇಷ ಕಾರಣವಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ಡಾ. ರಾಮ್ ಎಲ್ ಅರಸಿದ್ದಿ ಮತ್ತು ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಯಾದ ವೆಂಕಟೇಶ್ ಅವರ ತಂದೆ ಹಂಪಣ್ಣ ಅವರು ದೂರು ನೀಡಿದ್ದು, ಕೊಲೆಗಾರರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಮುಖಂಡರು ಪೊಲೀಸ್ ಠಾಣೆಗೆ ಭೇಟಿ ನೀಡಿ ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ.
































