
ಮುಳಗುಂದ: ಗದಗ ಜಿಲ್ಲೆಯ ಮುಳಗುಂದ ಹೊರವಲಯದಲ್ಲಿ ಶನಿವಾರ ಮಧ್ಯಾಹ್ನ ದುರಂತವೊಂದು ಸಂಭವಿಸಿದೆ. ಬೇಸಿಗೆಯ ಬಿಸಿಲಿನ ಬೇಗೆ ತಣಿಸಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಮೊರಂ ಗಣಿಗಾರಿಕೆಯಿಂದ ಸೃಷ್ಟಿಯಾಗಿದ್ದ ಬೃಹತ್ ಗುಂಡಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯ ವಿವರ: ಮುಳಗುಂದದ SJJM ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಬಡಿಗೇರ್ (15) ಮತ್ತು ಪರಶುರಾಮ ವಡ್ಡರ್ (15) ನಾಪತ್ತೆಯಾದ ದುರ್ದೈವಿಗಳು. ಇವರಿಬ್ಬರೂ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಶಾಲಾ ಅವಧಿ ಮುಗಿದ ನಂತರ ಒಟ್ಟು 6 ಜನ ಸ್ನೇಹಿತರ ತಂಡವು ಈಜಲು ತೆರಳಿತ್ತು. ಈ ವೇಳೆ ನೀರಿನ ಆಳ ತಿಳಿಯದೇ ಇಬ್ಬರು ಬಾಲಕರು ಮುಳುಗಿದ್ದಾರೆ. ಉಳಿದ ನಾಲ್ವರು ಸ್ನೇಹಿತರು ಭಯಭೀತರಾಗಿ ದಡಕ್ಕೆ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ: ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಬಾಲಕರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ನಾಪತ್ತೆಯಾದವರ ಪೈಕಿ ಬಸವರಾಜ ಬೆಳದಡಿ ಗ್ರಾಮದವನಾಗಿದ್ದರೆ, ಪರಶುರಾಮ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದವನು ಎಂದು ಗುರುತಿಸಲಾಗಿದೆ. ಮುಳಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಜೆಯವರೆಗೂ ಕಾರ್ಯಾಚರಣೆ ಮುಂದುವರಿದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.




































