
ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ 16ರ ಹರೆಯದ ಮೊನಾಲಿಸಾ ಎಂಬ ಅಲೆಮಾರಿ ಜನಾಂಗದ ಹುಡುಗಿ, ಸೋಷಿಯಲ್ ಮೀಡಿಯಾದ ಪ್ರಭಾವದಿಂದ ರಾತ್ರಿ ಬೆಳಗಾಗುವಷ್ಟರಲ್ಲಿ ಸೆನ್ಸೆಷನ್ ಆಗಿದ್ದಾರೆ. ಈ ಜನಪ್ರಿಯತೆ ಆಕೆಯ ಬದುಕನ್ನೇ ಬದಲಾಯಿಸಿದ್ದು, ಈಗ ಕೇರಳದ ಪ್ರಸಿದ್ದ ಚೆಮ್ಮನೂರ್ ಜುವೆಲ್ಲರಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಬಾಲಿವುಡ್ ಕನಸು ನನಸು!
ಮೊನಾಲಿಸಾ ಅವರು ಬಾಲಿವುಡ್ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದು, ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಅವರೇ ಅವರ ಮನೆಗೆ ಬಂದು ಈ ಅವಕಾಶ ನೀಡಿದರೆಂದು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ 21 ಲಕ್ಷ ರೂ. ಸಂಭಾವನೆ, ಅದರಲ್ಲಿ 1 ಲಕ್ಷ ರೂ. ಮುಂಗಡವಾಗಿ ಪಡೆದಿದ್ದಾರೆ.
ಮಾಹಿತಿಯನ್ನು ಬಹಿರಂಗಪಡಿಸಿದ ಮೊನಾಲಿಸಾ
“ನಾನು ಮಹಾಕುಂಭಕ್ಕೆ ಹೋಗಿ ರುದ್ರಾಕ್ಷಿ ಮಾರುತ್ತಿದ್ದೆ. ಆದರೆ, ವಿಧಿ ನನ್ನ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಶಿವನ ಆಶೀರ್ವಾದದಿಂದ ಜನಪ್ರಿಯತೆಯನ್ನು ಗಳಿಸಿದ್ದೇನೆ. ನನಗೆ ಬಾಲಿವುಡ್‌ನಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ, ಇದು ನನಗೆ ಕನಸು ನನಸಾದ ಕ್ಷಣ!” ಎಂದು ಭಾವನಾತ್ಮಕವಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಚೆಮ್ಮನೂರ್ ಜುವೆಲ್ಲರಿಯ ಮಾಲೀಕ ಬಾಬಿ ಚೆಮ್ಮನೂರ್ ಅವರ ಹೇಳಿಕೆಯ ಪ್ರಕಾರ, ಮೊನಾಲಿಸಾ ಅವರು ಕೇರಳದ ಕಲ್ಲಿಕೋಟೆಗೆ ಆಗಮಿಸಿ, ಬ್ರಾಂಡ್ ಅಂಬಾಸಿಡರ್ ಆಗಿ ಅಧಿಕೃತವಾಗಿ ಘೋಷಣೆಯಾಗಲಿದ್ದಾರೆ. ಇದಕ್ಕಾಗಿ ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುತ್ತದೆ.
ಸೋಷಿಯಲ್ ಮೀಡಿಯಾ ಯಾರನ್ನಾದರೂ ಬದಲಾಯಿಸಬಹುದು ಎಂಬುದಕ್ಕೆ ಮೊನಾಲಿಸಾ ಉದಾಹರಣೆ. ಒಂದು ದಿನ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ, ಇಂದು ಚಿನ್ನಾಭರಣ ಮಳಿಗೆ ಮತ್ತು ಬಾಲಿವುಡ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ!