
ಕಾರ್ಕಳ : ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ ಪದವು, ರೋಟರಿ ಕ್ಲಬ್ ಕಾರ್ಕಳ, ಜೆಸಿಐ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಮತ್ತು ರೊಟ್ರಾಕ್ಟ್ ಕ್ಲಬ್ ಕಾರ್ಕಳ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಕಸ್ತೂರ್ಬಾ ಮೆಡಿಕಲ್ ಕಾಲೇಜ್ (KMC) ಮಣಿಪಾಲ ಇವರ ನೇತೃತ್ವದಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠ ತಪಾಸಣೆಗೆ ಒತ್ತು ನೀಡಲಾಯಿತು.
ಡಾ. ಜೆಲಿಟಾ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ರೋಟರಿ ಕ್ಲಬ್‌ನ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ರೊಟ್ರಾಕ್ಟ್ ಕ್ಲಬ್‌ನ ಅಧ್ಯಕ್ಷ ಸಂದೇಶ್, ರೋ. ಇಕ್ಬಾಲ್ ಅಹಮದ್, ಮತ್ತು ಜನನಿ ಮಿತ್ರ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಉಪಸ್ಥಿತರಿದ್ದರು.
ಜನನಿ ಮಿತ್ರ ಮಂಡಳಿಯ ಅಧ್ಯಕ್ಷರಾದ ದಿವಾಕರ್ ಎಂ. ಬಂಗೇರ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. KMC ಮಣಿಪಾಲದ ಕೌನ್ಸಿಲರ್ ಪುಷ್ಪಲತಾ ಅವರು ತಪಾಸಣಾ ಶಿಬಿರದ ಮಹತ್ವ ಮತ್ತು ಪ್ರಕ್ರಿಯೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಈ ಶಿಬಿರದಲ್ಲಿ ಸುಮಾರು 60 ಮಂದಿ ಮಹಿಳೆಯರು ಭಾಗವಹಿಸಿ, ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.