
ಪಟ್ನಾ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ ಪಂಚ ಗ್ಯಾರಂಟಿಗಳನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿಗೆ ಈಗ ಸ್ವತಃ ಮಿತ್ರಪಕ್ಷದ ಮುಖ್ಯಮಂತ್ರಿಯೊಬ್ಬರಿಂದಲೇ ಮುಜುಗರ ಎದುರಾಗಿದೆ. ಬಿಹಾರದಲ್ಲಿ ಪ್ರತಿ ತಿಂಗಳು 125 ಯೂನಿಟ್‌ವರೆಗೆ ಉಚಿತ ವಿದ್ಯುತ್ ಘೋಷಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಸಲಹೆ ನೀಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಘೋಷಣೆ ಮಾಡಿದ್ದ ನಿತೀಶ್ ಕುಮಾರ್, ಆಗಸ್ಟ್ 1 ರಿಂದ ರಾಜ್ಯದ ಎಲ್ಲ ಗೃಹಬಳಕೆದಾರರಿಗೆ ತಿಂಗಳಿಗೆ 125 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಗುರುವಾರ ಪ್ರಕಟಿಸಿದ್ದರು. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. “ರಾಜ್ಯದ ಜನರು ವಿದ್ಯುತ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಈ ಯೋಜನೆ ಜಾರಿಗೊಳಿಸಲು ಬೇಕಾಗಿರುವ ನೆರವನ್ನು ಪ್ರಧಾನಿ ಮೋದಿಯವರೇ ನೀಡಿದ್ದಾರೆ. ಅವರನ್ನು ನಾವು ಗೌರವಿಸುತ್ತೇವೆ. ಅವರ ಮಾರ್ಗದರ್ಶನದಲ್ಲೇ ನಾವು ಕೆಲಸ ಮಾಡುತ್ತೇವೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಉಚಿತ ಕೊಡುಗೆಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ಎನ್‌ಡಿಎ ಹೇಳಿಕೊಂಡಿದ್ದರೂ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ‘200 ಯೂನಿಟ್ಸ್ ಉಚಿತ ವಿದ್ಯುತ್’ ಘೋಷಣೆ ಮಾಡುವ ಸಾಧ್ಯತೆಯಿದೆ. ಅದಕ್ಕೆ ಸೆಡ್ಡು ಹೊಡೆಯಲು ಮತ್ತು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.



































