
ಬೆಂಗಳೂರು: ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ನೀಡಲಾಗಿದ್ದು, ಇದರಿಂದ ಬಹಳಷ್ಟು ಪ್ರಯಾಣಿಕರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಕಂಡು ಪುರುಷರೂ ಉಚಿತ ಪ್ರಯಾಣಕ್ಕೆ ಆಗ್ರಹಿಸಿದ್ದರು. ಇದೀಗ ಈ ಕುರಿತಂತೆ ಸರ್ಕಾರ ಹೊಸ ತೀರ್ಮಾನ ಕೈಗೊಳ್ಳಲು ಸಜ್ಜಾಗಿದೆ.
ಕಿಡ್ನಿ ಸಮಸ್ಯೆ ಹೊಂದಿರುವ ಪುರುಷರಿಗೆ ಸೌಲಭ್ಯ?
ಮೂಲಗಳ ಪ್ರಕಾರ, ಎಲ್ಲಾ ಪುರುಷರಿಗೆ ಅಲ್ಲ, ಆದರೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಚಿಕಿತ್ಸೆಗೆ ಹಾಜರಾಗುವ ರೋಗಿಗಳಿಗೆ ಮಾತ್ರ ಉಚಿತ ಬಸ್ ಪ್ರಯಾಣ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಸಿಎಂಗೆ ಯು.ಟಿ. ಖಾದರ್ ಮನವಿ
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, “ರಾಜ್ಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುವ ಪುರುಷರು ವಾರಕ್ಕೊಮ್ಮೆ ಡಯಾಲಿಸಿಸ್‌ಗಾಗಿ ನಗರಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ, ಅವರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಬೇಕು” ಎಂದು ಮನವಿ ಮಾಡಿದ್ದಾರೆ.
ಶೀಘ್ರವೇ ಅಧಿಕೃತ ಘೋಷಣೆ?
ಸಿಎಂ ಸಿದ್ಧರಾಮಯ್ಯ ಈ ಮನವಿಯನ್ನು ಪರಿಗಣಿಸಿದರೆ, ಶೀಘ್ರದಲ್ಲೇ ಡಯಾಲಿಸಿಸ್‌ಗಾಗಿ ಹೋಗುವ ಪುರುಷರಿಗೂ ಉಚಿತ ಬಸ್ ಸೌಲಭ್ಯ ಲಭಿಸಲಿದೆ. ಈ ಕುರಿತಂತೆ ಸರ್ಕಾರದ ಅಧಿಕೃತ ಘೋಷಣೆಗೆ ಕಾದು ನೋಡಬೇಕಾಗಿದೆ.