
ಉಡುಪಿ: ಮಹಿಳೆಯೊಬ್ಬರಿಗೆ ಕರೆ ಮಾಡಿದ ಸೈಬರ್ ವಂಚಕರು, ಅವರ ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಂದ ಒಟ್ಟು ₹4,31,697 ಹಣವನ್ನು ಕಳವು ಮಾಡಿರುವ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಬೇಬಿ ಎಸ್. (55) ಅವರಿಗೆ ಗುರುವಾರ ಸಂಜೆ ‘ಐಸಿಐಸಿಐ ಕ್ರೆಡಿಟ್ ಕಾರ್ಡ್’ ಎಂಬ ಹೆಸರಿನಿಂದ ಕರೆ ಬಂದಿದೆ. ಕರೆಯನ್ನು ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಅವರ ಮೊಬೈಲ್‌ನಲ್ಲಿ ಸ್ವಯಂಚಾಲಿತವಾಗಿ ಅಪರಿಚಿತ ‘ಐಮೊಬೈಲ್ ಆ್ಯಪ್’ ಇನ್‌ಸ್ಟಾಲ್ ಆಗಿದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ಪರಿಶೀಲಿಸಿದಾಗ, ಮಹಿಳೆಯ ಬ್ಯಾಂಕ್ ಖಾತೆಯಿಂದ ಕ್ರೆಡಿಟ್ ಕಾರ್ಡ್ ಮೂಲಕ ₹2,94,800 ಮತ್ತು ₹1,29,900 ಹಾಗೂ ಡೆಬಿಟ್ ಕಾರ್ಡ್ ಮೂಲಕ ₹2,000, ₹999, ₹1,999 ಮತ್ತು ₹1,999 ರಂತೆ ಒಟ್ಟು ₹4,31,697 ಹಣವು ವಂಚಕರ ಖಾತೆಗೆ ವರ್ಗಾವಣೆಯಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಬರ್ ವಂಚಕರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.



































