
ಹೆಬ್ರಿ : ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮೊದಲ ಹಂತದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ₹7 ಕೋಟಿ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ದೇವಳದ ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭವು ಜುಲೈ 13ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಸರದಿ ಅರ್ಚಕರಾದ ಪಿ. ಸುಧಾಕರ ಅಡಿಗರ ಉಪಸ್ಥಿತಿಯಲ್ಲಿ ಈ ಶುಭ ಕಾರ್ಯ ನೆರವೇರಲಿದೆ.
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ದಾರು ಮುಹೂರ್ತ, ಶಿಲಾ ಮುಹೂರ್ತ, ನಗಾರಿ ಭುವನೇಶ್ವರೀ ಪೂಜೆ, ಗೋಪುರದ ಶಿಲಾ ಪ್ರತಿಷ್ಠಾಪನೆ, ಶ್ರೀ ದೇವರ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿವೆ. ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ದೇವರ ಅನಂತ ದೀಕ್ಷಾ ವಿಧಿ ನಡೆಯಲಿದ್ದು, ಭಕ್ತಾದಿಗಳು ದೀಕ್ಷಾ ವಿಧಿ ಪಡೆದು ದಿನನಿತ್ಯ ಶ್ರೀ ದೇವರ ಮಂತ್ರ ಜಪವನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಮುಜರಾಯಿ ಸಚಿವರಿಂದ ಶಿಲಾನ್ಯಾಸ: ನೂತನವಾಗಿ ನಿರ್ಮಾಣಗೊಳ್ಳಲಿರುವ ನಗಾರಿ ಗೋಪುರವು ಹಳೆಯ ರೂಪುರೇಷೆಗಳಂತೆಯೇ, ತುಳುನಾಡಿನ ಸಾಂಪ್ರದಾಯಿಕ ಪಾರಂಪರಿಕ ವಾಸ್ತುವಿಗೆ ಅನುಗುಣವಾಗಿರಲಿದೆ. ಇದರ ಶಿಲಾನ್ಯಾಸವನ್ನು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸಲಿರುವರು. ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಅವರು ಶುಭಾಶಂಸನೆಗೈಯಲಿದ್ದು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ಅಧ್ಯಕ್ಷತೆ ವಹಿಸಲಿರುವರು.
ಈ ಸಂದರ್ಭದಲ್ಲಿ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುರೇಶ ಶೆಟ್ಟಿ ಗುರ್ಮೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಜಯಪ್ರಕಾಶ ಹೆಗ್ಡೆ, ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋ ಆಳ್ವ, ಪೆರ್ಡೂರು ಮಾಜಿ ಮಂಡಲ ಪ್ರಧಾನ ಶಾಂತಾರಾಮ್ ಸೂಡ ಕೆ., ರಾಜ್ಯ ಧಾರ್ಮಿಕ ಪರಿಷತ್‌ನ ವಿಶೇಷ ಆಹ್ವಾನಿತ ರವಿಶಂಕರ ಶೆಟ್ಟಿ, ಸದಸ್ಯೆ ಮಲ್ಲಿಕಾ ಪಕ್ಕಳ, ವಿದ್ವಾನ್ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ದೇವಳದ ಅರ್ಚಕ ರಘುಪ್ರಸಾದ ಅಡಿಗ ಮೊದಲಾದ ಗಣ್ಯರು ಭಾಗವಹಿಸಲಿರುವರು.
ಬೆಳಗ್ಗೆ 11 ಗಂಟೆಯಿಂದ ಪೆರ್ಡೂರು ಮೇಳದ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ ಯಕ್ಷಗಾನ ವೈಭವ ನಡೆಯಲಿದೆ.