
ಪಟನಾ: ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ. ತೇಜಸ್ವಿ ಯಾದವ್ ಅವರು ತಮ್ಮ ಜಾತಿಯವರನ್ನು ಮದುವೆಯಾಗದೇ ಹೋದದ್ದಕ್ಕೆ ಟೀಕಿಸಿದ ರಾಜ್ ಬಲ್ಲಭ್, “ಅವರು ಹರಿಯಾಣ-ಪಂಜಾಬ್‌ನಿಂದ ಜೆರ್ಸಿ ಹಸುವನ್ನು ಕರೆತಂದಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಆರ್‌ಜೆಡಿಯಿಂದ ತೀವ್ರ ಆಕ್ರೋಶ
ಮಾಜಿ ಶಾಸಕರ ಈ ಹೇಳಿಕೆಗೆ ಆರ್‌ಜೆಡಿ ನಾಯಕ ಕೌಶಲ್ ಯಾದವ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ತೇಜಸ್ವಿ ಅವರ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಮೂಲಕ ರಾಜ್ ಬಲ್ಲಭ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಈ ಹೇಳಿಕೆ ಕೇವಲ ತೇಜಸ್ವಿ ಅವರ ಪತ್ನಿಗೆ ಮಾತ್ರವಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಈ ವ್ಯಕ್ತಿಯನ್ನು ಮತ್ತೆ ಜೈಲಿಗೆ ಕಳುಹಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ತೇಜಸ್ವಿ ಯಾದವ್ ಮತ್ತು ರಾಜ್‌ಶ್ರೀ ವಿವಾಹದ ಹಿನ್ನಲೆ
ತೇಜಸ್ವಿ ಯಾದವ್ ಅವರು ತಮ್ಮ ಬ್ಯಾಚ್‌ಮೇಟ್ ರಾಚೆಲ್ ಕೊಡಿನ್ಹೋ ಅವರನ್ನು 2021 ರಲ್ಲಿ ವಿವಾಹವಾಗಿದ್ದಾರೆ. ಮೂಲತಃ ಹರಿಯಾಣದವರಾದ ರಾಚೆಲ್ ಅವರು ವಿವಾಹದ ನಂತರ ತಮ್ಮ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್, ಹತ್ತು ವರ್ಷಗಳ ಹಿಂದೆ ಕುರ್ಮಿ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಸೇರಿದ್ದರು.