
ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಬದಿಯ ಸರಕಾರಿ ಜಮೀನುಗಳ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ರಸ್ತೆ ಬದಿಯ ಅತಿಕ್ರಮಣ ತೆರವುಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿದೆ. ಈ ನಿರ್ಧಾರವು ಸುಪ್ರೀಂ ಕೋರ್ಟ್‌ನ ತೀರ್ಪಿನ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯ ಮೂಲಕ ಜಾರಿಗೆ ಬಂದಿದೆ.
ಸಮಸ್ಯೆಯ ಹಿನ್ನೆಲೆ ಮತ್ತು ಬದಲಾದ ಜವಾಬ್ದಾರಿ
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹಾಗೂ ಗ್ರಾಮದ ರಸ್ತೆಗಳ ಬದಿಯಲ್ಲಿ ಅನಧಿಕೃತ ಗೂಡಂಗಡಿ, ಕಟ್ಟಡಗಳು ಮತ್ತು ವಾಣಿಜ್ಯ ನಿರ್ಮಾಣಗಳು ವ್ಯಾಪಕವಾಗಿವೆ. ಈ ಒತ್ತುವರಿಗಳನ್ನು ತೆರವುಗೊಳಿಸಲು ಈ ಹಿಂದೆ ಲೋಕೋಪಯೋಗಿ ಇಲಾಖೆಗೆ ನಿರಂತರವಾಗಿ ಜಿಲ್ಲಾಡಳಿತ ಹಾಗೂ ರಾಜಕೀಯ ಒತ್ತಡ ಎದುರಾಗುತ್ತಿತ್ತು. ಇದರಿಂದಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಕಷ್ಟಕರವಾಗಿತ್ತು.
ಆದರೆ, ಈಗಿನ ಹೊಸ ನಿಯಮದ ಪ್ರಕಾರ, ರಸ್ತೆ ಬದಿಯ ಒತ್ತುವರಿ ತೆರವು ಜವಾಬ್ದಾರಿಯನ್ನು ಸ್ಥಳೀಯ ಮಟ್ಟದಲ್ಲಿರುವ ಪಿಡಿಒಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಲೋಕೋಪಯೋಗಿ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.